ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಗೌರವಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಕ್ಕಳೊಂದಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯ ಸಭಾಮಂಟಪದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಶೇಷ ದಾಂಡಿಯಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮಕ್ಕಳ ಹುಮ್ಮಸ್ಸನ್ನು ಕಂಡು ಪ್ರೋತ್ಸಾಹಿಸಲು ಮುಂದಾದ ಡಾ. ಪ್ರಭಾಕರ ಕೋರೆ ಅವರು, ಮಕ್ಕಳೊಂದಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿ ಸಂಭ್ರಮಿಸಿದರು.
ಅವರ ಈ ಸರಳತೆ ಮತ್ತು ಮಕ್ಕಳ ಮೇಲಿನ ಅಕ್ಕರೆಯನ್ನು ಕಂಡು ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮಕ್ಕಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಗಣ್ಯರೊಬ್ಬರು ತಮ್ಮೊಂದಿಗೆ ಬೆರೆತು ನೃತ್ಯ ಮಾಡಿದ್ದು ಮಕ್ಕಳಲ್ಲಿ ಮತ್ತು ಗ್ರಾಮಸ್ಥರಲ್ಲಿ ಉತ್ಸಾಹವನ್ನು ಇಮ್ಮಡಿಸಿತು. ಈ ವೀಡಿಯೊ ಹಾಗೂ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿವೆ.
