ಯಕ್ಷಂಬಾ-ಚಿಕ್ಕೋಡಿ ಮಾರ್ಗದ ನಣದಿವಾಡಿ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯಕ್ಸಂಬಾ ಪಟ್ಟಣದ ಹಿರಿಯ ರಂಗಭೂಮಿ ಕಲಾವಿದ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಯಕ್ಷಂಬಾ ಪಟ್ಟಣದ ರಂಗಭೂಮಿ ಕಲಾವಿದ, ನಿವೃತ್ತ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ ಶಂಕರ ಮೋಪ್ಗಾರ (63) ಸಾವನ್ನಪ್ಪಿದ್ದಾರೆ.
ಗಣೇಶ ಅವರು ಸಾಯಂಕಾಲ ತಮ್ಮ ವೈಯಕ್ತಿಕ ಕೆಲಸಕ್ಕೆ ಚಿಕ್ಕೋಡಿ ಪಟ್ಟಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ನಣದಿವಾಡಿ ಗ್ರಾಮದ ಟೈಲ್ಸ್ ಅಂಗಡಿ ಬಳಿ ಅಪಘಾತ ಸಂಭವಿಸಿದೆ. ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಗಾಯಗೊಂಡಿದ್ದ ಅವರನ್ನು ಚಿಕ್ಕೋಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
