VIJAYNAGAR

ತುಂಗಭದ್ರಾ ಜಲಾಶಯದ ಆವರಣದಲ್ಲಿ ಹನಿ ನೀರಿಗಾಗಿ ಮೂಕ ಪ್ರಾಣಿಗಳ ರೋಧನ

Share

ಮೂರು ರಾಜ್ಯಗಳಿಗೆ ನೀರು ಪೂರೈಸುವ ವಿಶ್ವವಿಖ್ಯಾತ ತುಂಗಭದ್ರಾ ಜಲಾಶಯದ ಆವರಣದಲ್ಲಿ ಇದೀಗ ಮೂಕ ಪ್ರಾಣಿಗಳು ಹನಿ ನೀರಿಗೂ ಪರದಾಡುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಸುಡು ಬಿಸಿಲಿನಲ್ಲಿ ನೀರಿನ ದಾಹ ತೀರಿಸಿಕೊಳ್ಳಲು ಕೋತಿಗಳು ಹರಸಾಹಸ ಪಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರಭಾಗದಲ್ಲಿರುವ ತುಂಗಭದ್ರಾ ಜಲಾಶಯದ ಆವರಣದ ಮೇಲ್ಭಾಗದಲ್ಲಿ ಮೂಕ ಪ್ರಾಣಿಗಳ ಆರ್ತನಾಟ ಮುಗಿಲು ಮುಟ್ಟಿದೆ. ಬಿಸಿಲ ಗಾಳಿ ಮತ್ತು ಸುಡುವ ತಾಪಮಾನದಿಂದಾಗಿ ತೀವ್ರ ನೀರಿನ ದಾಹಕ್ಕೊಳಗಾಗಿರುವ ಮಂಗವೊಂದು, ಕುಡಿಯುವ ನೀರಿಗಾಗಿ ನಲ್ಲಿಗೆ ಬಾಯಿ ಹಾಕಿ ಹರಸಾಹಸ ಪಡುತ್ತಿರುವ ದೃಶ್ಯ ಕಂಡುಬಂದಿದೆ. ಮೂರು ರಾಜ್ಯಗಳ ಕೋಟ್ಯಂತರ ಜನರ ಕುಡಿಯುವ ಹಾಗೂ ನೀರಾವರಿ ಅಗತ್ಯವನ್ನು ಪೂರೈಸುವ ಇಂತಹ ಬೃಹತ್ ಜಲಾಶಯದ ಆವರಣದಲ್ಲೇ ಪ್ರಾಣಿ-ಪಕ್ಷಿಗಳಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ತುಂಗಭದ್ರಾ ಮಂಡಳಿ (TB Board) ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ದಾಹ ತೀರಿಸಿಕೊಳ್ಳಲು ಮಂಗರಾಯ ಅನುಭವಿಸುತ್ತಿರುವ ಈ ಕಷ್ಟ ಹಾಗೂ ಪರದಾಟವನ್ನು ಕಂಡು ಸ್ಥಳಕ್ಕೆ ಆಗಮಿಸಿದ ಪ್ರವಾಸಿಗರು ತೀವ್ರ ಕನಿಕರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನುಷ್ಯರಿಗೆ ಸರಿಯಾದ ವ್ಯವಸ್ಥೆ ಮಾಡದಿದ್ದರೂ ಪರವಾಗಿಲ್ಲ, ಆದರೆ ಸ್ವತಃ ತಾವೇ ನೀರು ಹುಡುಕಿಕೊಳ್ಳಲಾಗದ ಈ ಮೂಕ ಪ್ರಾಣಿ-ಪಕ್ಷಿಗಳಿಗೆ ಕನಿಷ್ಠ ಕುಡಿಯುವ ನೀರಿನ ತೊಟ್ಟಿ ಅಥವಾ ಸೂಕ್ತ ವ್ಯವಸ್ಥೆಯನ್ನಾದರೂ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಜಲಾಶಯದ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರು, ಪ್ರಾಣಿಗಳ ಈ ದಯನೀಯ ಸ್ಥಿತಿಗೆ ಕಾರಣರಾದ ಟಿಬಿ ಬೋರ್ಡ್ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣವೇ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

Tags:

error: Content is protected !!