Belagavi

ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ವಿಜೃಂಭಣೆ, ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ

Share

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಅ.6) ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಟೋಬರ್ 26 ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ವ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮದ ದಿನದಂದು ಕೋಟೆ ಕೆರೆಯಿಂದ ಸಂಗೊಳ್ಳಿ ರಾಯಣ್ಣ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ಆಯೋಜಿಸಲು ತೀರ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಕುಂಭ ಮೇಳ, ಜಾನಪದ ಕಲಾ ತಂಡಗಳೊಂದಿಗೆ ಶಿಸ್ತು ಬದ್ಧವಾಗಿ ಸಾಗುವಂತೆ ಕ್ರಮ ಜರುಗಿಸಲು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಎಲ್ಲ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮ ವಹಿಸಲು ಸೂಚಿಸಿದ ಅವರು ಕಾರ್ಯಕ್ರಮದ ಕುರಿತು ಮುದ್ರಿಸಲ್ಪಡುವ ಆಮಂತ್ರಣ ಪತ್ರಿಕೆಗಳನ್ನು ಶಿಷ್ಟಾಚಾರದ ಪ್ರಕಾರ ಮುದ್ರಿಸಿ ಗಣ್ಯರಿಗೆ ಸಾಕಷ್ಟ ಮುಂಚಿತವಾಗಿ ತಲುಪಿಸುವ ಕಾರ್ಯವಾಗಬೇಕು. ಕಾರ್ಯಕ್ರಮದ ಮುಖ್ಯ ವೇದಿಕೆಗೆ ಹಕ್ಕಿ-ಬುಕ್ಕರು ಎಂದು ನಾಮಕರಣ ಮಾಡಬೇಕು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಅಂತಿಮಗೊಳಿಸಲು ಸೂಚಿಸಿ ವಾಲ್ಮೀಕಿ ಅವರ ಶ್ಲೋಕಗಳ ಕಿರುಪುಸ್ತಕ ಮುದ್ರಿಸಿ ವಿತರಿಸಲು ಕ್ರಮ ವಹಿಸಲು ಹೇಳುತ್ತಿದ್ದರು.

ಎಲ್ಲ ಸರ್ಕಾರಿ ಕಚೇರಿ, ಗ್ರಾಮ ಪಂಚಾಯತ್, ಶಾಲಾ ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿದ ಛಾಯಾಚಿತ್ರಗಳನ್ನು ಒದಗಿಸಬೇಕು. ನಗರದ ಇಂದಾಲ್ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ನಿರ್ಮಾಣಕ್ಕೆ ಹಾಗೂ ಮದಭಾವಿ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ವೃತ್ತ ಎಂದು ನಾಮಕರಣಕ್ಕೆ ತರಿವರೆಯಾಗಿ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ ಸಮಾಜದ ಮುಖಂಡರು, ಗಣ್ಯರು ಮಾತನಾಡಿ ಕಾರ್ಯಕ್ರಮದ ವೇದಿಕೆಗೆ ಈ ಬಾರಿ ಹಕ್ಕಿ-ಬುಕ್ಕ ವೇದಿಕೆ ಎಂದು ನಾಮಕರಣ ಮಾಡಲು, ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿಗಳು ಹಾಜರಾಗಬೇಕು. ಮಹರ್ಷಿ ವಾಲ್ಮೀಕಿಯವರ ವಿಶೇಷ ಶ್ಲೋಕಗಳನ್ನು, ಪೌರಾಣಿಕ ಚಿತ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರಚುರಪಡಿಸಬೇಕು. ಶ್ಲೋಕಗಳ ಕಿರು ಪುಸ್ತಕ ಮುದ್ರಿಸಿ ವಿತರಿಸಬೇಕು.

ನಗರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒತ್ತಾಯ, ಮದಕರಿ ನಾಯಕ ವೃತ್ತ ನಿರ್ಮಾಣವಾಗಬೇಕು. ಸಾಧಕರಿಗೆ ಸನಾಮಾನ ಮಾಡುವ ಸಂದರ್ಭದಲ್ಲಿ ಗುಣಮಟ್ಟದ ನೆನಪಿನ ಕಾಣಿಕೆ ನೀಡಬೇಕು. ಕಾರ್ಯಕ್ರಮದ ದಿನದಂದು ಸಮಾಜದ ಪ್ರತಿಯೊಬ್ಬರು ಭಾಗಿಯಾಗಬೇಕು. ಎಲ್ಲ ಸರ್ಕಾರಿ ಕಚೇರಿ, ಗ್ರಾಮ ಪಂಚಾಯತ್, ಶಾಲಾ ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಮದಭಾವಿ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಬೇಕು. ನಗರದಲ್ಲಿ ಮಹರ್ಷಿ ವಾಲ್ಮೀಕಿ ಉದ್ಯಾನವನ ಅಭಿವೃದ್ಧಿಪಡಿಸಲು ಮನವಿ, ಹುಲ್ಯಾಣೂರು ಗ್ರಾಮದ ಪ್ರಾಥಮಿಕ ಶಾಲೆ ಅಭಿವೃದ್ಧಿ ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮಣಗೌಡ ಕಣೆಗೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಉಪ ಆಯುಕ್ತ

ಉದಯಕುಮಾರ ತಳವಾರ, ಡಾ. ಕವಿತಾ ಕುಸುಗಲ್, ಮುಖಂಡರಾದ ಮಲ್ಲೇಶ ಚೌಗಲಾ, ಭಾವಕಣ್ಣ ಭುಂಗ್ಯಾಗೋಳ(ನಾಯಕ), ಸುರೇಶ ಗವಣ್ಣವರ, ಮಹೇಶ ಶ್ರೀವಿಹಳ್ಳಿ, ರಾಜಶೇಖರ ತಳವಾರ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!