ಹುಬ್ಬಳ್ಳಿಯ ಹೊಸ ಗಟ್ಟೂರಿನಲ್ಲಿರುವ ಜೈನ ಮಂದಿರದಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಮಂದಿರದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಗಲ್ಲಾಪೆಟ್ಟಿಗೆ ಒಡೆದು ಸುಮಾರು ಮೂರು ಲಕ್ಷ ರೂಪಾಯಿ ಹಣವನ್ನು ಕದ್ದೊಯ್ದಿದ್ದಾರೆ. ಘಟನೆಯಿಂದ ಮಂದಿರದ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಆತಂಕ ಮೂಡಿದೆ.
ತಡರಾತ್ರಿ ಜೈನ ಮಂದಿರವನ್ನೇ ಟಾರ್ಗೆಟ್ ಮಾಡಿದ ಕಳ್ಳರು, ಮಂದಿರದ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ಗಲ್ಲಾಪೆಟ್ಟಿಗೆಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಹಣ ಕಳ್ಳತನವಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ಕೃತ್ಯವನ್ನು ಮೂವರು ಕಳ್ಳರು ಎಸಗಿರಬಹುದು ಎನ್ನಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸಿಪಿ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಆರ್. ನಾಯಕ್ ಅವರು ಜೈನ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮಂದಿರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
