Belagavi

ಸರ್ವೋದಯಚಾ ವಾಟಸರೂ’ ಕೃತಿ ಲೋಕಾರ್ಪಣೆ: ಡಾ. ಶಿವಾಜಿರಾವ್ ಕಾಗಣೀಕರ ಕಾರ್ಯ ಸ್ಮರಿಸಿದ ಮೇಧಾ ಪಾಟ್ಕರ್

Share

ಸಮಾಜವು ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ, ಜಲ, ಜಮೀನು ಮತ್ತು ಜಂಗಲ್ (ಅರಣ್ಯ) ರಕ್ಷಣೆಗಾಗಿ ಜೀವಮಾನವಿಡೀ ಶ್ರಮಿಸಿದ ಸರ್ವೋದಯ ಕಾರ್ಯಕರ್ತ ಡಾ. ಶಿವಾಜಿರಾವ್ ಕಾಗಣೀಕರ ಅವರಂತಹ ವ್ಯಕ್ತಿಗಳ ಕಾರ್ಯ ಸಮಾಜಕ್ಕೆ ತಲುಪುವುದು ಅತ್ಯಂತ ಅಗತ್ಯ ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯಲ್ಲಿ ನಡೆದ ‘ಸರ್ವೋದಯಚಾ ವಾಟಸರೂ’ ಎಂಬ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ ಮರಾಠಿ ವಿಕಾಸ ಸಂಸ್ಥೆ ಮುಂಬೈ ಹಾಗೂ ಗುರುವರ್ಯ ವಿ. ಗೋ. ಸಾಠೆ ಮರಾಠಿ ಪ್ರಬೋಧಿನಿ ಬೆಳಗಾವಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಡಾ. ಶಿವಾಜಿದಾದಾ ಕಾಗಣೀಕರ ಅವರ ಆತ್ಮಚರಿತ್ರೆ ಆಧಾರಿತ ‘ಸರ್ವೋದಯಚಾ ವಾಟಸರೂ’ ಪುಸ್ತಕದ ಕನ್ನಡ ಹಾಗೂ ಮರಾಠಿ ಆವೃತ್ತಿಗಳ ಬಿಡುಗಡೆ ಸಮಾರಂಭ ಗೋಖಲೆ ರಂಗಮಂದಿರದಲ್ಲಿ ರವಿವಾರ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೇಧಾ ಪಾಟ್ಕರ್, “ಇಂದಿನ ಭೋಗಸಂಸ್ಕೃತಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಯ ಮಧ್ಯೆ ಶೋಷಿತರ ಬದುಕು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜೀವನ, ಕೃಷಿ ಮತ್ತು ನೈಸರ್ಗಿಕ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕಾಗಣೀಕರ ಅವರು ಮಾಡಿದ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ” ಎಂದರು.

ತಮ್ಮ ಕೃತಿ ಬಿಡುಗಡೆ ಕುರಿತು ಭಾವನಾತ್ಮಕವಾಗಿ ಮಾತನಾಡಿದ ಶಿವಾಜಿರಾವ್ ಕಾಗಣೀಕರ, “ಅತ್ಯಂತ ಬಡ ಕುಟುಂಬದಿಂದ ಬಂದ ನನಗೆ ಸಾಪ್ಟೆ, ಪೆನ್ಸಿಲ್ ಕೂಡ ಇರಲಿಲ್ಲ. ಆದರೆ ಸಾಣೆ ಗುರೂಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಗಳಿಂದ ಪ್ರೇರಿತನಾಗಿ ಸಾಮಾಜಿಕ ಕ್ಷೇತ್ರಕ್ಕೆ ಧುಮುಕಿದೆ” ಎಂದು ನೆನಪಿಸಿಕೊಂಡರು. ಲಕ್ಷಾಂತರ ಸಸಿಗಳನ್ನು ನೆಡುವುದು, ಸಾವಿರಾರು ಗೋಬರ್ ಗ್ಯಾಸ್ ಪ್ಲಾಂಟ್ ಸ್ಥಾಪಿಸುವುದು ಹಾಗೂ ರೈತರ ಏಳಿಗೆಗಾಗಿ ಶ್ರಮಿಸಲು ಈ ಮಹಾನಾಯಕರ ವಿಚಾರಗಳೇ ಪ್ರೇರಣೆ ಎಂದ ಅವರು, ಈ ಕಾರ್ಯಕ್ಕೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಿದರು. ಶೀಘ್ರದಲ್ಲೇ ಈ ಕೃತಿಯ ಇಂಗ್ಲಿಷ್ ಆವೃತ್ತಿಯೂ ಹೊರಬರಲಿದೆ ಎಂದು ಸಂಘಟಕರು ತಿಳಿಸಿದರು.

Tags:

error: Content is protected !!