ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ನಿನ್ನೆ ರಾತ್ರಿ ಜಾಗೃತಿ ಕಾರ್ಯಕ್ರಮ ನಡೆಯಿತು. ‘ಎಸ್‌ಐಆರ್ ಜಾಗೃತಿ ಹಾಗೂ ಮತ ಕಾವಲು ಸಮಿತಿ’ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಭಾಗವಹಿಸಿ ಮಾತನಾಡಿದರು. ಎಸ್‌ಐಆರ್‌ನಿಂದ ಮತದಾರರ ಹೆಸರುಗಳು ಡಿಲೀಟ್ ಆಗಿರುವುದಾಗಿ ಆರೋಪಿಸಿದ ಹಲವು ಮಂದಿ ಪ್ರಕಾಶ್ ರಾಜ್ ಅವರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. “ನಾವು ಜೀವಂತವಾಗಿದ್ದರೂ ಮರಣ ಹೊಂದಿದ್ದೇವೆ ಎಂದು ನಮೂದಿಸಿ ಮತವನ್ನು ಡಿಲೀಟ್ ಮಾಡಲಾಗುತ್ತಿದೆ” ಎಂದು ಕೆಲವರು ಅಳಲು ತೋಡಿಕೊಂಡರು. ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ರಂಗಾ-ಬಿಲ್ಲಾ ಜೋಡಿ’ ಎಂದು ಉಲ್ಲೇಖಿಸಿದ ಅವರು, ಎಸ್‌ಐಆರ್ ಹಿಂದೆ ಎಲ್ಲರನ್ನೂ ಮತದಾರರ ಪಟ್ಟಿಯಿಂದ ಹೊರಗಿಡುವ ಉದ್ದೇಶವಿದೆ ಎಂದು ಆರೋಪಿಸಿದರು.
ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ನಿಂದ ಉಂಟಾದ ಸಮಸ್ಯೆಗಳನ್ನು ನೋಡಿದ್ದೇವೆ ಎಂದು ಹೇಳಿದ ಪ್ರಕಾಶ್ ರಾಜ್, ಇದೀಗ ಕರ್ನಾಟಕದಲ್ಲೂ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದ್ದು, 1 ಕೋಟಿ 8 ಲಕ್ಷ ಮತದಾರರ ಮತದಾನದ ಹಕ್ಕಿನ ಬಗ್ಗೆ ಆತಂಕ ಎದುರಾಗಿದೆ ಎಂದು ಹೇಳಿದರು.

ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ ಅವರು, “ಮನುಷ್ಯ ಬದುಕಿದ್ದಾನೆ, ಆದರೆ ಎಸ್‌ಐಆರ್‌ನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತೋರಿಸಲಾಗುತ್ತಿದೆ” ಎಂದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ರಾಜ್ಯದಲ್ಲಿ ಫಾರ್ಮ್ ನಂಬರ್ 7 ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ನಾಯಕರು ಹಾಗೂ ಯುವ ಮೋರ್ಚಾ ಮುಖಂಡರು ಮತದಾರರ ಹೆಸರುಗಳನ್ನು ಅಳಿಸಲು ಫಾರ್ಮ್-7 ಬಳಸುತ್ತಿದ್ದಾರೆ ಎಂದು ದೂರಿದರು. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಇನ್ನು “400 ಪಾರ್ ಎಂದು ಹೇಳಿದ್ದವರು 240ಕ್ಕೆ ಇಳಿದಿರುವುದು ಅವರ ಭಯಕ್ಕೆ ಕಾರಣವಾಗಿದೆ. ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಕೈಬಿಟ್ಟರೆ ಇವರ ಕಥೆ ಗೊತ್ತಾಗುತ್ತದೆ” ಎಂದು ಪ್ರಕಾಶ್ ರಾಜ್ ಹೇಳಿದರು.
ಎಸ್‌ಐಆರ್ ಮೂಲಕ ದೇಶದಲ್ಲಿ ಎನ್‌ಆರ್‌ಸಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಆದಿವಾಸಿಗಳು, ದಲಿತರು, ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ದೂರಿದರು.
“ಕರ್ನಾಟಕವನ್ನು ಪಶ್ಚಿಮ ಬಂಗಾಳ ಆಗಲು ಬಿಡುವುದಿಲ್ಲ. ರಂಗಾ-ಬಿಲ್ಲಾ ಗ್ಯಾಂಗ್ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು” ಎಂದು ಅವರು ಹೇಳಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಜನರು ಜಾಗೃತರಾಗಬೇಕು ಎಂದು ಕರೆ ನೀಡಿದ ಪ್ರಕಾಶ್ ರಾಜ್, “ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಇಂದಿನಿಂದಲೇ ಹೋರಾಟ ಮಾಡೋಣ. ಎಸ್‌ಐಆರ್ ವಿರುದ್ಧದ ಹೋರಾಟ ಇನ್ನಷ್ಟು ಜೋರಾಗಲಿ” ಎಂದು ಕರೆ ನೀಡಿದರು.
