Kagawad

ಶೇಡಬಾಳ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ರೈತರು, ಸೆರೆಹಿಡಿಯಲು ಅರಣ್ಯ ಇಲಾಖೆ ಸಕಲ ಸಿದ್ಧತೆ

Share

ಕಾಗವಾಡ ತಾಲೂಕಿನ ಶೇಡಬಾಳ-ಶಿರುಗುಪ್ಪಿ ಮಾರ್ಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೈನುಗಾರಿಕೆ ಮುಗಿಸಿ ವಾಪಸ್ ಬರುವಾಗ ರೈತರಿಗೆ ಎದುರಾದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.

ಕಾಗವಾಡ ತಾಲೂಕಿನ ಶೇಡಬಾಳ-ಶಿರುಗುಪ್ಪಿ ಮಾರ್ಗದ ಪ್ರಶಾಂತ್ ಎಂದಗೌಡರ್ ಎಂಬುವವರಿಗೆ ಚಿರತೆ ಎದುರಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಪ್ರತಿದಿನದಂತೆ ಹಸುಗಳ ಹಾಲು ಕರೆದು ಗ್ರಾಮಕ್ಕೆ ಮರಳುತ್ತಿದ್ದ ವೇಳೆ ಅವರಿಗೆ ಚಿರತೆ ಕಂಡುಬಂದಿದ್ದು, ಕೂಡಲೇ ಅವರು ನಗರ ಪಂಚಾಯತ್ ಅಧ್ಯಕ್ಷ ಉತ್ಕರ್ಷ ಪಾಟೀಲ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.ಮಾಹಿತಿ ಲಭ್ಯವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿ ರಾಕೇಶ್ ಅರ್ಜುನವಾಡೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರದಂದು ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತೋಟದ ಭಾಗದಲ್ಲಿ ಸಂಚರಿಸದಂತೆ ನಗರ ಪಂಚಾಯತ್ ವತಿಯಿಂದ ವ್ಯಾಪಕ ಜನಜಾಗೃತಿ ಮೂಡಿಸಲಾಗಿದೆ.ಶೇಡಬಾಳದ ಸೌದತ್ತಿ ತೋಟದ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವ ವಾರ್ತೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲ ಯುವಕರು ಸ್ವಯಂಪ್ರೇರಿತರಾಗಿ ರಾತ್ರಿ ವೇಳೆ ಕೈಯಲ್ಲಿ ಲಾಠಿ ಹಿಡಿದು ಚಿರತೆ ಸೆರೆಹಿಡಿಯಲು ಮುಂದಾಗಿರುವ ದೃಶ್ಯಗಳು ಕಂಡುಬಂದಿವೆ. ಸಾರ್ವಜನಿಕರು ರಾತ್ರಿ ಸಮಯದಲ್ಲಿ ಅತಿಯಾದ ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ಅರಣ್ಯ ಇಲಾಖೆ, ಆದಷ್ಟು ಶೀಘ್ರದಲ್ಲೇ ಚಿರತೆಯನ್ನು ಸೆರೆಹಿಡಿಯಲಾಗುವುದು ಎಂದು ಭರವಸೆ ನೀಡಿದೆ.

Tags:

error: Content is protected !!