ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ದಿವಂಗತ ಬಿ.ಎ. ಪಾಟೀಲ (ಭಾತೆ ಸರ್) ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮತ್ತು ಆತ್ಮವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ಅಪಾರ ಜ್ಞಾನ, ಸರಳ ನಡೆ-ನುಡಿ ಹಾಗೂ ವಿದ್ಯಾರ್ಥಿಗಳ ಬಗ್ಗೆ ಹೊಂದಿದ್ದ ಕಾಳಜಿಯಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರಿಸಿದ್ದರು ಎಂದು ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎನ್. ಮಠಪತಿ ಹೇಳಿದರು.


ರವಿವಾರದಂದು ಶಿವಾನಂದ ಮಹಾವಿದ್ಯಾಲಯದ ಸಭಾಭವನದಲ್ಲಿ ದಿವಂಗತ ಪ್ರಾಚಾರ್ಯ ಬಿ.ಎ. ಪಾಟೀಲ ಇವರಿಗೆ ಶ್ರದ್ಧಾಂಜಲಿ ಅರ್ಪಿಸುವ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್. ಮಠಪತಿ ಇವರು, “ಕಳೆದ ಒಂದು ವಾರಗಳಿಂದ ಮಹಾವಿದ್ಯಾಲಯದಲ್ಲಿ ಓದಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ವಿಶೇಷ ಹುದ್ದೆಯಲ್ಲಿರುವ ಎಲ್ಲ ಮಾಜಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಬಿ.ಎ. ಪಾಟೀಲ್ ಸರ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.

ಮಾಜಿ ವಿದ್ಯಾರ್ಥಿ ಹಾಗೂ ಧಾರವಾಡದ ಪ್ರೊಫೆಸರ್ ಡಾ. ಸುರೇಶ್ ಹುಲ್ಲೇನವರ್ ಮಾತನಾಡಿ, “ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೋತ್ಸಾಹಿಸಿದ ಅವರ ಸೇವೆ ಸ್ಮರಣೀಯ. ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಅವರ ಶೈಕ್ಷಣಿಕ ಸೇವೆಯ ಹೆಗ್ಗಳಿಕೆಯಾಗಿದೆ. ಅವರ ನೆನಪು ಸದಾ ನಮ್ಮ ಹೃದಯದಲ್ಲಿ ಇರುತ್ತದೆ” ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಅಭಯಕುಮಾರ್ ಅಕಿವಾಟೆ, ಪ್ರಾಚಾರ್ಯ ಎಸ್.ಪಿ. ತಳವಾರ್, ನಿವೃತ್ತ ಪ್ರಾಧ್ಯಾಪಕ ಕುಮಾರ್ ಮಾಲಗಾವೆ, ಪ್ರಾಚಾರ್ಯ ಶೋಭಾ ಕವಟ್ಟಿಗೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎ. ಪಾಟೀಲ್, ಎಸ್.ಬಿ. ಪಾಟೀಲ್, ಗೋವಾ ಉದ್ಯಮಿ ಎಸ್.ಎಂ. ಬೂರಗಾಟವೆ, ವಿ.ವಿ. ಸಮಿತಿಯ ಅಧ್ಯಕ್ಷ ಜ್ಯೋತಿಕುಮಾರ್ ಪಾಟೀಲ್, ರಾಜಗೌಡ ಪಾಟೀಲ್, ಅವರ ಸುಪುತ್ರ ಶಿವಾನಂದ ಪಾಟೀಲ್ ಹಾಗೂ ಜ್ಯೋತಿಗೌಡ ಪಾಟೀಲ್ ನುಡಿ ನಮನದಲ್ಲಿ ಬಿ.ಎ. ಪಾಟೀಲ್ ಸರ್ ಇವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಹಾಗೂ ಎನ್ಸಿಸಿ ವಿಭಾಗದ ಪ್ರಮುಖರಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿದ ಅವರು ಅನೇಕರ ಪಾಲಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಅವರನ್ನು ಪ್ರೀತಿಸುವ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನುಡಿ ನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಭೀಮ ಪಾಟೀಲ್, ಅಶೋಕ್ ಪಾಟೀಲ್, ಜೆ.ಕೆ. ಪಾಟೀಲ್, ಚಿದಾನಂದ ಅವಟಿ, ರಮೇಶ್ ಚೌಗುಲೆ, ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ದಿವಂಗತ ಬಿ.ಎ. ಪಾಟೀಲ ಇವರ ಕುಟುಂಬದವರು ಸಹಕರಿಸಿದರು.
