Belagavi

ಬೆಳಗಾವಿಯಲ್ಲಿ ಅಲ್ಪಸಂಖ್ಯಾತ ಮತದಾರರ ಪಟ್ಟಿ ಅಳಿಸಲು ಯತ್ನ

Share

ಅಲ್ಪಸಂಖ್ಯಾತ ಸಮುದಾಯದ 198 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ನಕಲಿ ದಾಖಲೆ ಹಾಗೂ ಸುಳ್ಳು ಮಾಹಿತಿ ನೀಡಿ ಫಾರ್ಮ್ ನಂ.7 ಸಲ್ಲಿಸಲು ಯತ್ನಿಸಿದ ಆರೋಪದಡಿ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಸೇರಿದಂತೆ 20ರಿಂದ 25 ಜನರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬಿಜೆಪಿ ಮುಖಂಡ ಡಾ. ರವಿ ಪಾಟೀಲ್, ವಿಜಯ ಆಸ್ಪತ್ರೆ ಸಿಬ್ಬಂದಿ ಪ್ರಶಾಂತ ಮುಂದಿನಮನಿ, ಶಂಕರ್ ನಾಯಕ್ ಸೇರಿದಂತೆ ಇತರರ ವಿರುದ್ಧ ವಾರ್ಡ್ ನಂ.12ರ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸೆ. 30ರಂದು ದೂರು ನೀಡಿದ್ದಾರೆ.

ಸೆ. 22ರಂದು ಬೆಳಗಾವಿಯ ವೀರಭದ್ರನಗರದ ಮತಗಟ್ಟೆ ಸಂಖ್ಯೆ 195 ಮತ್ತು 196ರಲ್ಲಿ ಈ ಘಟನೆ ನಡೆದಿತ್ತು. ಜೀವಂತವಾಗಿರುವ ಹಾಗೂ ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಗುರಿಯಾಗಿಸಿಕೊಂಡು ಅಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರ್ಮ್ ನಂ.7 ಮೂಲಕ ಬೋಗಸ್ ಅರ್ಜಿಗಳನ್ನು ಸಲ್ಲಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಅಂದು ಡಾ. ರವಿ ಪಾಟೀಲ್ ಸೇರಿದಂತೆ ಮೂವರನ್ನು ತಡೆದು ಪ್ರಶ್ನಿಸಿದ್ದರು.
ಘಟನೆ ನಡೆದ ಎಂಟು ದಿನಗಳ ಬಳಿಕ ಬಿಎಲ್‌ಒ ನೀಡಿದ ದೂರಿನ ಆಧಾರದ ಮೇಲೆ ಮಾರ್ಕೆಟ್ ಪೊಲೀಸರು ಅಪರಾಧ ಸಂಖ್ಯೆ 218/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4), 336(3), 336(4), 353, 61(2), 3(5), 3(7), 192 ಮತ್ತು 190ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:

error: Content is protected !!