ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕಾರವಾಗಲು ನಿರ್ಣಾಯಕ ಪಾತ್ರ ವಹಿಸಿದ ಉನ್ನತ ಅಧಿಕಾರಿಗಳನ್ನು ಕನ್ನಡ ಸಂಘಟನೆಗಳು ಭೇಟಿ ಮಾಡಿ ಅಭಿನಂದಿಸಿವೆ. ಸ್ಥಳೀಯ ಆಡಳಿತದ ಈ ದಿಟ್ಟ ಹೆಜ್ಜೆಯು ಗಡಿಭಾಗದಲ್ಲಿ ಭಾಷಾ ಸೌಹಾರ್ದತೆ ಮತ್ತು ಕನ್ನಡದ ಹಿತಾಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.


ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರ ದೀರ್ಘಕಾಲದ ಕನಸಾಗಿದ್ದ ಕರ್ನಾಟಕ ಪರವಾದ ಮಹತ್ವದ ಗೊತ್ತುವಳಿ ಅಧಿಕೃತವಾಗಿ ಅಂಗೀಕಾರಗೊಂಡ ಐತಿಹಾಸಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ಸಮಾನ ಮನಸ್ಕ ಕನ್ನಡ ಪರ ಹೋರಾಟಗಾರರು ಹಾಗೂ ಸಂಘಟನೆಗಳ ಪ್ರಮುಖರು ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಕಾರ್ತಿಕ ಅವರನ್ನು ಭೇಟಿಯಾಗಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಈ ಪ್ರಮುಖ ನಿರ್ಣಯವು ಸುಗಮವಾಗಿ ಅಂಗೀಕಾರಗೊಳ್ಳಲು ಮತ್ತು ಸ್ಥಳೀಯ ಆಡಳಿತದ ಮಟ್ಟದಲ್ಲಿ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಲು ಹಿರಿಯ ಅಧಿಕಾರಿಗಳು ತೋರಿದ ಸಕಾರಾತ್ಮಕ ಸ್ಪಂದನೆ ಹಾಗೂ ಬದ್ಧತೆಗೆ ಕನ್ನಡಪರ ಮುಖಂಡರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
