Chikkodi

ಚಿಕ್ಕೋಡಿ‌ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ

Share

ತಾಲೂಕು ಮಟ್ಟದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಕುಂದುಕೊರತೆಗಳ ಸಭೆಯು ತಹಶೀಲ್ದಾರ ರಾಜೇಶ ಬುರ್ಲಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಸಾರ್ವಜನಿಕರ ಹಾಗೂ ದಲಿತ ಮುಖಂಡರ ವಿವಿಧ ಕುಂದುಕೊರತೆಗಳು ಪ್ರಸ್ತಾಪಗೊಂಡು, ಅಧಿಕಾರಿಗಳಿಂದ ಪರಿಹಾರದ ಭರವಸೆ ದೊರೆಯಿತು.

ಗ್ರಾಮ ಪಂಚಾಯತಿಗಳಲ್ಲಿ ಇ-ಸ್ವತ್ತು ಹಾಗೂ ಕೈಬರಹ ಉತಾರಗಳನ್ನು ನೀಡುತ್ತಿಲ್ಲ ಎಂದು ರಾವಸಾಬ ಫಕೀರೆ ಮತ್ತು ನಂದಕುಮಾರ ದರಬಾರೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ ರಾಜೇಶ ಬುರ್ಲಿ, ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕರೋಶಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಹುಳುಗಳು ಬರುತ್ತಿರುವ ಬಗ್ಗೆ ಶೋಭಾ ತಳವಾರ ಆಕ್ರೋಶ ವ್ಯಕ್ತಪಡಿಸಿದರು. ಅಶುದ್ಧ ನೀರು ಸರಬರಾಜು ಮಾಡುತ್ತಿರುವ ಪಿಡಿಓ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಜೋಡಕುರಳಿ ಗ್ರಾಮದಲ್ಲಿ ಸರಕಾರಿ ಪಶು ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗೆ ಮೀಸಲಿಡಲಾಗಿದ್ದ 5 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಮುಖಂಡ ಮಾರುತಿ ಕಾಂಬಳೆ ವಿಷಯ ಪ್ರಸ್ತಾಪಿಸಿದರು. ಒತ್ತುವರಿ ತೆರವುಗೊಳಿಸಿ ಕಠಿಣ ಕ್ರಮ ಜರುಗಿಸುವಂತೆ ತಹಶೀಲ್ದಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಂದಕ್ಕೂ ಹಣ ಪಡೆಯಲಾಗುತ್ತಿದೆ, ಇದರಿಂದ ಬಡವರಿಗೆ ಉಚಿತ ಸೇವೆ ಸಿಗುತ್ತಿಲ್ಲ ಎಂದು ಸುದರ್ಶನ ತಮ್ಮಣ್ಣವರ ದೂರಿದರು. ಈ ಕುರಿತು ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ರಾಜೇಂದ್ರ ಖಣದಾಳೆ, ಇನ್ಮುಂದೆ ಆಸ್ಪತ್ರೆಯಲ್ಲಿ ಇಂತಹ ಯಾವುದೇ ದೂರುಗಳು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡಾಪುರ ಗ್ರಾಮಕ್ಕೆ ಸೂಕ್ತ ಬಸ್ ಸೌಕರ್ಯ ಕಲ್ಪಿಸುವಂತೆ ದೀಪಿಕಾ ಕಾಂಬಳೆ ಮನವಿ ಮಾಡಿದರು. ತಕ್ಷಣವೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ತಹಶೀಲ್ದಾರ ಸೂಚನೆ ನೀಡಿದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಬಿಡುಗಡೆಯಾದ ಎಸ್‌ಸಿಟಿಎಸ್‌ಪಿ (SCTSP) ಅನುದಾನದ ಕುರಿತು ಕೆಲವು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಸಭೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಹೇಶ ಶಿಂಗೆ ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ (EO) ಡಾ. ರವಿರಾಜ ಹುಕ್ಕೇರಿ, ಎಲ್ಲಾ ಇಲಾಖೆಗಳಿಂದ ನಿಖರ ಮಾಹಿತಿ ತರಿಸಿ ಮುಂದಿನ ಸಭೆಗೆ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.
2007ರಲ್ಲಿ ಪುರಸಭೆ ವತಿಯಿಂದ ಹಾಲಟ್ಟಿ ಎಸ್‌ಸಿ ಸಮುದಾಯ ಭವನಕ್ಕೆ ಹಾಗೂ ಸ್ಮಶಾನ ಭೂಮಿಗೆ ಜಾಗ ನೀಡದಿರುವ ಕುರಿತು ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಎಂ.ಆರ್. ಮುನ್ನೋಳ್ಳಿಕರ ಅವರು ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಅವರನ್ನು ಪ್ರಶ್ನಿಸಿದರು. ಈ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಶ್ರಮಿಸುವುದಾಗಿ ಮುಖ್ಯಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಅರ್ಚನಾ ಸಾನೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿರಾಜ ಹುಕ್ಕೇರಿ, ಸಿಪಿಐ ವಿಶ್ವನಾಥ ಚೌಗಲಾ, ಸಿಡಿಪಿಓ ಸಂತೋಷ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ತಾಲೂಕು ವೈದ್ಯಾಧಿಕಾರಿ ಡಾ. ರಾಜೇಂದ್ರ ಖಣದಾಳೆ, ಲೋಕೋಪಯೋಗಿ ಇಲಾಖೆ ಎಇಇ ಎಂಟೆತ್ತಿನವರ, ಬಾಳಾಸಾಬ ಜಂಬಗಿ, ಸಂಜಯ ದೇಸಾಯಿ, ರಾಜು ಗಸ್ತಿ ಹಾಗೂ ದಲಿತ ಮುಖಂಡರಾದ ರಾವಸಾಬ ಫಕೀರೆ, ನಂದಕುಮಾರ ದರಬಾರೆ, ಸುದರ್ಶನ ತಮ್ಮನ್ನವರ, ಎಂ.ಆರ್. ಮುನ್ನೋಳಿಕರ, ರಾಘವೇಂದ್ರ ಸನದಿ, ಆನಂದ ಅರಬಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:

error: Content is protected !!