ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ದೊರೆಯುವ ಸಂದರ್ಭದಲ್ಲಿ ಮಹಿಳೆಯರು ಈಗಿನಿಂದಲೇ ಸಂಘಟನೆಯ ಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಮಹಿಳಾ ನಾಯಕತ್ವ ತರಬೇತಿ ಶಿಬಿರವನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಸ್. ಬೆಳವಡಿ ಅವರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಮಹಿಳಾ ಸಂಘಟನೆಯನ್ನು ಬಲಪಡಿಸುವ ಹಾಗೂ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರಕ್ಕೆ ಸತೀಶ್ ಜಾರಕಿಹೊಳಿ ಅವರು ವಿಶೇಷ ಕಾಳಜಿ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, “ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಶ್ಲಾಘಿಸಿದರು. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ದೊರೆಯುವ ಸಂದರ್ಭದಲ್ಲಿ, ಮಹಿಳೆಯರು ಈಗಿನಿಂದಲೇ ಸಂಘಟನೆಯ ಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಾರ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಶೇಗಾವಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹಾಗೂ ಗಣ್ಯರು ಆಗಮಿಸಿದ್ದರು. ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀನ್ ನದಾಫ್ ಸೇರಿದಂತೆ ಜಿಲ್ಲಾ ಹಾಗೂ ಮಹಿಳಾ ಬ್ಲಾಕ್ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿದ ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಎಸ್. ಬೆಳವಡಿ, “ನಮ್ಮ ನಾಯಕರು ಹಾಗೂ ಮಾರ್ಗದರ್ಶಕರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ಮಹಿಳಾ ಸಂಘಟನೆ ಮತ್ತು ಮಹಿಳಾ ನಾಯಕತ್ವದ ಬಗ್ಗೆ ಹೊಂದಿರುವ ಕಾಳಜಿ ನಮಗೆಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ. ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ರಾಜ್ಯಕ್ಕೆ ಮಾದರಿಯಾಗಬೇಕು ಎಂಬ ಸತೀಶ್ ಜಾರಕಿಹೊಳಿರವರ ಆಶಯ ನಮಗೆ ಹೆಮ್ಮೆಯ ಸಂಗತಿ. ಅವರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಮಹಿಳಾ ನಾಯಕಿಯರನ್ನು ನಾಯಕತ್ವದ ಜವಾಬ್ದಾರಿಗಳಿಗೆ ಸಜ್ಜುಗೊಳಿಸುವುದು ನಮ್ಮ ಸಂಕಲ್ಪ” ಎಂದು ಹೇಳಿದರು.
ಎರಡು ದಿನಗಳ ತರಬೇತಿ ಶಿಬಿರದಲ್ಲಿ ಶೈಲಜಾ ಹಿರೇಮಠ, ಮುನೀರ್, ಸುಧೀರ್,ದೇವರಾಜ ಪಾಟೀಲ್ ಹಾಗೂ ಡಾ. ಅಶ್ವಿನಿ ಅವರು ಉಪನ್ಯಾಸಕರಾಗಿ ಭಾಗವಹಿಸಿ, ಮಹಿಳಾ ನಾಯಕತ್ವ, ಸಂಘಟನೆ, ಸಾರ್ವಜನಿಕ ಸೇವೆ, ರಾಜಕೀಯ ಜವಾಬ್ದಾರಿ, ಸಂವಹನ ಕೌಶಲ್ಯ, ಮಾಧ್ಯಮ ಸಂವಹನ ಹಾಗೂ ಸಂಘಟನಾ ಸಾಮರ್ಥ್ಯ ಸೇರಿದಂತೆ ವಿವಿಧ ಮಹತ್ವದ ವಿಷಯಗಳ ಕುರಿತು ಮನಮುಟ್ಟುವ ರೀತಿಯಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು.
