Bailahongala

ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಕ್ಕೆ ಪಾಪಿ ಪತಿಯಿಂದ ಕೃತ್ಯ!

Share

ಸಂಸಾರ ಅಂದಮೇಲೆ ಸಣ್ಣಪುಟ್ಟ ಕಲಹಗಳು ಸಹಜ. ಆದ್ರೆ ಇಲ್ಲೊಬ್ಬ ಪತಿ ಹೆಂಡತಿಯ ಶೀಲದ ಮೇಲೆ ಶಂಕೆ ಪಟ್ಟು, 17 ವರ್ಷಗಳ ಕಾಲ ಜೊತೆಯಾಗಿದ್ದಾಕೆಯನ್ನ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ! ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಈ ರೀತಿಯೊಂದು ಧಾರುಣ ಘಟನೆ ನಡೆದಿದ್ದು, ಕಲ್ಲಿನಿಂದ ಜಜ್ಜಿ ಪತ್ನಿಯನ್ನ ಕೊಲೆ ಮಾಡಿ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪತ್ನಿ ಶೀಲದ ಮೇಲೆ ಶಂಕೆ, ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.!
17 ವರ್ಷಗಳ ಹಿಂದೆ ಲವ್ ಮ್ಯಾರೇಜ್, ಸಣ್ಣ ಸಂಶಯಕ್ಕೆ ಪತ್ನಿಗೆ ಚಟ್ಟ.!
ಬೈಕ್ ಮೇಲೆ ಕರೆದೊಯ್ದು, ಬರ್ಬರ ಹತ್ಯೆಗೈದ ಪಾಪಿ ಪತಿ.!

ಹೌದು, ಪ್ರೀತಿ ಮಾಡಿ ಮದುವೆಯಾಗಿದ್ದ ಆ ದಂಪತಿ, 17 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ರು. ಆದ್ರೆ, ಇತ್ತೀಚೆಗೆ ಆತನ ಮನಸ್ಸಿನಲ್ಲಿ ಮೂಡಿದ ಒಂದು ಸಂಶಯ, ಇಡೀ ಕುಟುಂಬದಲ್ಲಿ ಸೂತಕದ ಛಾಯೇ ನಿರ್ಮಾಣ ಮಾಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಗೊಲ್ಲರ ಓಣಿಯ ನಿವಾಸಿ, 31 ವರ್ಷದ ಲಕ್ಷ್ಮಿ ಮಾಡಮಗೇರಿ ಕೊಲೆಯಾದ ನತದೃಷ್ಡ ಮಹಿಳೆ. ಕಳೆದ ಏಳು ತಿಂಗಳಿಂದ ಕಿರುಕುಳ ತಾಳಲಾರದೆ ಲಕ್ಷ್ಮಿ ಗಂಡ ರಾಜು ಎಂಬಾತನಿಂದ ದೂರ ಉಳಿದಿದ್ಲು. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ಲು. ಆದ್ರೆ ಇದೇ ಕೋಪದಲ್ಲಿದ್ದ ಪತಿ, ನಿನ್ನೆ ಮಧ್ಯಾಹ್ನ ಮಾತುಕತೆ ನೆಪದಲ್ಲಿ ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಬಾರದ ಊರಿಗೆ ಕಳಿಸಿದ್ದಾನೆ. ಪ್ರತಿದಿನ ಕೆಲಸಕ್ಕೆ ಹೋಗಿ ಮನೆಗೆ ಬರ್ತಿದ್ದಾಕೆ ಇಂದು ಮನೆಗೆ ಬರಲಿಲ್ಲಾ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದು, ಸಹೋದರಿ ಕೊಲೆ‌ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಅಂತಾ ಒತ್ತಾಯ ಮಾಡಿದ್ದಾರೆ..

ಇನ್ನು ಕಳೆದ 17 ವರ್ಷಗಳ‌ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾಕೆಯ ಮೇಲೆಯೆ ಪತಿರಾಯನಿಗೆ ಸಂಶಯ ಬರಲು ಶುರುವಾಗಿದೆ. ಜೊತೆಗೆ ಗಂಡನ ಬಿಟ್ಟು ದೂರ ಉಳಿದಿದ್ದಕ್ಕೆ ಕುಪಿತಗೊಂಡಿದ್ದ ರಾಜು ಮಾಡಮಗೇರಿ ಪತ್ನಿ ಮನವೊಲಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಬೈಲಹೊಂಗಲ ಸಮೀಪದ ಅಮಟೂರು ಮತ್ತು ನಯಾನಗರ ಮಾರ್ಗ ಮಧ್ಯದ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ ಆರೋಪಿ, ಪತ್ನಿಯೊಂದಿಗೆ ಮತ್ತೆ ಗಲಾಟೆ ತೆಗೆದಿದ್ದಾನೆ. ಈ ವೇಳೆ ಉದ್ರೇಕಗೊಂಡ ಪಾಪಿ ಪತಿ, ರಸ್ತೆ ಬದಿಯಲ್ಲಿದ್ದ ಪೊದೆಗೆ ಕರೆದೊಯ್ದು ಕಲ್ಲನ್ನು ಎತ್ತಿ ಮೃತ ಲಕ್ಷ್ಮಿ ತಲೆಗೆ ಜಜ್ಜಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರು ಕರುಣೆ ತೋರಿಸದ ಆತ, ಶವವನ್ನು ರಸ್ತೆ ಪಕ್ಕದ ಪೊದೆಯೊಳಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಶವಾಗಾರದ ಎದುರು ಮೃತ ಮಹಿಳೆ ಸಂಬಂಧಿಕರು ರಾಜು ವಿರುದ್ದ ಆಕ್ರೋಶ ಹೊರಹಾಕಿದ್ದು, ಆರೋಪಿ ರಾಜುಗೆ ತಕ್ಕ ಶಿಕ್ಷೆ ನೀಡಬೆಕು ಎಂದು ಒತ್ತಾಯಿಸಿದ್ದಾರೆ…

ಸದ್ಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರದ ಕನಸು ಕಂಡವಳು ದುರಂತ ಅಂತ್ಯ ಕಂಡಿದ್ದಾಳೆ…

Tags:

error: Content is protected !!