Khanapur

ಹೊರಗಿನವರಿಗೆ ಅವಕಾಶ ನೀಡದೇ ಸ್ಥಳೀಯ ಅಭ್ಯರ್ಥಿಯನ್ನು ಪರಿಗಣಿಸಲು ಎಂ.ಎಂ ಸಾಹುಕಾರ ಆಗ್ರಹ

Share

2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಬೆಳಗಾವಿ ಜಿಲ್ಲೆಯ ಕೆಲ ಮುಖಂಡರು ಖಾನಾಪೂರ ಕ್ಷೇತ್ರದಿಂದ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದು, ಚುನಾವಣೆಯಲ್ಲಿ ಹೊರಗಿನವರಿಗೆ ಅವಕಾಶ ನೀಡದೇ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಪಕ್ಷದ ಹೈಕಮಾಂಡ್ ಗೆ ಮನವಿ ಸಲ್ಲಿಸಲಾಗುವುದು ಎಂದು ಪಕ್ಷದ ಹಿರಿಯ ಕಾರ್ಯಕರ್ತ ಎಂ.ಎಂ ಸಾಹುಕಾರ ಹೇಳಿದರು.

ತಾಲೂಕಿನ ಬೀಡಿ ಗ್ರಾಮದಲ್ಲಿ ಆಯೋಜಿಸಿದ್ದ ಪಕ್ಷದ ಹಿರಿಯ ಮುಖಂಡರು ಮತ್ತು ಬೀಡಿ ಹೋಬಳಿಮಟ್ಟದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಈಗಾಗಲೇ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ನೆರೆಯ ಮಹಾರಾಷ್ಟ್ರದಿಂದ ವಲಸೆ ಬಂದು ಇಲ್ಲಿಂದ ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಒಮ್ಮೆ ಗೆದ್ದು ಎರಡು ಬಾರಿ ಸೋಲನ್ನು ಅನುಭವಿಸಿದ್ದಾರೆ. ಇವರು ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುವ ಸೂಚನೆ ನೀಡಿದ್ದು, ಇದಕ್ಕೆ ಸ್ಥಳೀಯ ಕಾರ್ಯಕರ್ತರ ವಿರೋಧವಿದೆ. ಇವರೊಂದಿಗೆ ನಾಗರಾಜು ಯಾದವ ಅವರೂ ಸಹ ಖಾನಾಪೂರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ, ಇದನ್ನೂ ನಾವು ವಿರೋಧಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಪಕ್ಷದ ಅನೇಕ ಮುಖಂಡರು ಕಣಕ್ಕಿಳಿಯಲು ಸಮರ್ಥರಿದ್ದು, ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಅವಕಾಶ ನೀಡಬಾರದು ಎಂಬುದು ಪಕ್ಷದ ಹಿರಿಯರ ಬಳಿ ನಮ್ಮ ಆಗ್ರಹವಾಗಿದೆ” ಎಂದು ವಿವರಿಸಿದರು.

“ನಮ್ಮ ಆಗ್ರಹವನ್ನು ಪಕ್ಷದ ಹೈಕಮಾಂಡ್ ಗೆ ತಿಳಿಸಿದ ಬಳಿಕ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಹಿಂದು-ಮುಸ್ಲಿಂ, ಮರಾಠಾ, ಲಿಂಗಾಯತ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಸೇರಿದಂತೆ ಸ್ಥಳೀಯರಾದ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುತ್ತೇವೆ. ಆದರೆ ಪಕ್ಷ ಹೊರಗಿನವರಿಗೆ ಟಿಕೆಟ್ ನೀಡುವ ತೀರ್ಮಾನ ಕೈಗೊಂಡರೆ ಅದನ್ನು ಎಲ್ಲರೂ ಸೇರಿ ಒಮ್ಮತದಿಂದ ವಿರೋಧಿಸುತ್ತೇವೆ” ಎಂದು ಸಾಹುಕಾರ ಉಚ್ಚರಿಸಿದರು.

ಈ ಸಂಧರ್ಭದಲ್ಲಿ ಪಕ್ಷದ ಹಿರಿಯರಾದ ಮಹೇಶ ಪಾಟೀಲ, ಗೋಪಾಳ ಬಾಪಶೇಟ, ಜ್ಞಾನೇಶ್ವರ ಪಾಳೇಕರ ಮತ್ತಿತರರು ಇದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!