ಎಸ್ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ. ವಿಜಯಪುರ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೈಜ ಹಾಗೂ ಅನರ್ಹ ಮತಗಳನ್ನು ನಿಯಮಾನುಸಾರ ಪರಿಶೀಲಿಸಿ ತೆಗೆದುಹಾಕುವುದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯಬಾರದು ಎಂದು ಹೇಳಿದ್ದಾರೆ. ತಮ್ಮ ಮತಕ್ಷೇತ್ರದಲ್ಲಿ 1,372 ಮತಗಳಿಗೆ ಬಲ್ಕ್ ಆಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದವರೇ ಬಳಿಕ ಅವುಗಳನ್ನು ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿರುವ ಎಂ.ಬಿ. ಪಾಟೀಲ, ವಿಜಯಪುರ ನಗರ ಕ್ಷೇತ್ರದಲ್ಲೂ 13 ಸಾವಿರ ಮತಗಳ ವಿರುದ್ಧ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಹೇಳಿದ್ದಾರೆ. ಚುನಾವಣಾ ಆಯೋಗವನ್ನು ಕೇಂದ್ರ ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ. ಇನ್ನು ಅರ್ಹ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದು ಹೇಳಿದ ಅವರು, ನೈಜ ಮತಗಳನ್ನು ನಿಯಮಾನುಸಾರ ತೆಗೆದುಹಾಕುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಅನ್ಯಾಯವಾಗಿ ಮತಗಳನ್ನು ಡಿಲೀಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ದೇಶದ ಹಲವು ಕಡೆ ಇಂತಹ ಕಾರಣಗಳಿಂದ ಚುನಾವಣಾ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೂ ಪ್ರಶ್ನೆಗಳನ್ನು ಎತ್ತಿದರು. ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ಈ ಕುರಿತು ಸುಪ್ರೀಂಕೋರ್ಟ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇನ್ನು ತಮ್ಮ ಮತಕ್ಷೇತ್ರದ ಎಸ್ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಎಂ.ಬಿ. ಪಾಟೀಲ, 1,372 ಮತಗಳಿಗೆ ಬಲ್ಕ್ ಆಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಬಳಿಕ ಅರ್ಜಿ ಸಲ್ಲಿಸಿದವರೇ ಎಆರ್ಒ ಕಚೇರಿಗೆ ತೆರಳಿ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ ಎಂದು ಹೇಳಿದರು. ಭೀಮು ಗೊಳಸಂಗಿ, ಹುಚ್ಚೆಪ್ಪ ಗಾಣಿಗೆರ, ವಿನಾಯಕ ಮಮದಾಪುರ, ಆನಂದ ಅಂಬಿಗೇರ ಹಾಗೂ ಮಹೇಶ್ ಮುಕರ್ತಿಹಾಳ ಅವರು ಅರ್ಜಿ ಸಲ್ಲಿಸಿದ್ದರು ಎಂದು ಹೆಸರುಗಳನ್ನು ಉಲ್ಲೇಖಿಸಿದ ಸಚಿವರು, ಮೊದಲು ಅರ್ಜಿ ಸಲ್ಲಿಸಿ ನಂತರ ವಾಪಸ್ ಪಡೆದಿರುವುದೇಕೆ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲೂ ಇದೇ ರೀತಿಯ ಅರ್ಜಿಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.

ಸೆಪ್ಟೆಂಬರ್ 22ರಂದು 5 ಸಾವಿರ ಹಾಗೂ ಸೆಪ್ಟೆಂಬರ್ 23ರಂದು 8 ಸಾವಿರ—ಒಟ್ಟು 13 ಸಾವಿರ ಮತಗಳಿಗೆ ಫಾರ್ಮ್-7 ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ರಾಜಕುಮಾರ ಬಿರಾದಾರ್, ಸಚಿನ್ ಪಡಗಾನೂರ, ಚಂದ್ರಶೇಖರ ಕಟವಗಿ, ಮಲ್ಲನಗೌಡ ಪಾಟೀಲ, ಪ್ರೇಮಾನಂದ ಬಿರಾದಾರ್ ಹಾಗೂ ಗಿರೀಶ್ ಬಿರಾದಾರ್ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಬಲ್ಕ್ ಆಗಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಬಳಿಕ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ ಎಂದು ಎಂ.ಬಿ. ಪಾಟೀಲ ಆರೋಪಿಸಿದರು. ಇನ್ನು ಮುಖ್ಯ ಚುನಾವಣಾ ಆಯುಕ್ತರ ವಿಚಾರದಲ್ಲಿ ದಲಿತರು ಎಂಬ ಕಾರಣಕ್ಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂಬ ಸಂಸದ ಗೋವಿಂದ ಕಾರಜೋಳ ಅವರ ಹೇಳಿಕೆಗೂ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಜಾತಿಯನ್ನು ತರುವುದು ಸರಿಯಲ್ಲ ಎಂದು ಹೇಳಿದ ಅವರು, ದಲಿತರು, ಲಿಂಗಾಯತರು ಎಂದು ಜಾತಿಯ ಆಧಾರದ ಮೇಲೆ ವಿಚಾರವನ್ನು ನೋಡುವುದು ತಪ್ಪು ಎಂದರು.
“ಲಿಂಗಾಯತರಾಗಿದ್ದರೆ ಇಂತಹ ಪ್ರಶ್ನೆಗಳನ್ನು ಕೇಳಬಹುದೇ?” ಎಂದು ಪ್ರಶ್ನಿಸಿದ ಎಂ.ಬಿ. ಪಾಟೀಲ, ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮ ಅಥವಾ ಲೋಪದ ಬಗ್ಗೆ ಮಾತನಾಡುವಾಗ ಜಾತಿಯನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಬಾರದು ಎಂದು ಹೇಳಿದ್ದಾರೆ.
