Belagavi

ಬೆಳಗಾವಿ ಸುವರ್ಣಸೌಧ ಗಾಂಧಿ ಪ್ರತಿಮೆ ವೆಚ್ಚದ ಹಗರಣ…

Share

ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣ ಮತ್ತು ಉದ್ಘಾಟನಾ ವೆಚ್ಚದ ಬಗ್ಗೆ ಮಾಹಿತಿ ನೀಡುವಲ್ಲಿ ವಿವಿಧ ಇಲಾಖೆಗಳು ಕೇವಲ ಚೆಂಡಾಟವಾಡುತ್ತಿವೆ. ಯಾವುದೇ ಇಲಾಖೆಯೂ ಜವಾಬ್ದಾರಿ ಹೊತ್ತುಕೊಳ್ಳದೆ ಸಾರ್ವಜನಿಕರ ಹಣದ ದುರ್ಬಳಕೆಯ ಸಂಶಯ ಮೂಡಿಸಿರುವ ಈ ಪ್ರಕರಣದ ವಿರುದ್ಧ ಉತ್ತರದ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಭೀಮಪ್ಪ ಗಡಾದ್ ಹೈಕೋರ್ಟ್ ಮೊರೆ ಹೋಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರಿಂದ ನಿರ್ಮಿಸಲಾದ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಹಾಗೂ ‘ಕ್ಲಾಸಿಕ್ ಟ್ರೇಡರ್ಸ್’ ಗುತ್ತಿಗೆಯ ವೆಚ್ಚದ ಬಗ್ಗೆ 2025ರ ಮಾರ್ಚ್‌ನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯು ಕೇವಲ ಕಡತಗಳನ್ನು ಪರಸ್ಪರ ವರ್ಗಾಯಿಸುತ್ತಾ ಸಬೂಬು ಹೇಳುತ್ತಿವೆಯೆ ಹೊರತು, ಅಧಿಕೃತ ವೆಚ್ಚದ ಲೆಕ್ಕವನ್ನು ಮಾತ್ರ ಇದುವರೆಗೆ ಬಿಡುಗಡೆ ಮಾಡಿಲ್ಲ.

ಕೋಟಿ ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚಾಗಿದ್ದರೂ ಯಾವ ಇಲಾಖೆಯೂ ಹಣ ಭರಿಸಿಲ್ಲ ಎಂದು ನುಣುಚಿಕೊಳ್ಳುತ್ತಿರುವುದು ಈ ಹಗರಣದ ಹಿಂದೆ ದೊಡ್ಡ ರಹಸ್ಯವಿರುವುದನ್ನು ಸ್ಪಷ್ಟಪಡಿಸುತ್ತದೆ. ಗಾಂಧಿ ಜಯಂತಿಯೊಳಗೆ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡು ವೆಚ್ಚದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಭೀಮಪ್ಪ ಗಡಾದ್ ಎಚ್ಚರಿಸಿದ್ದಾರೆ.

Tags:

error: Content is protected !!