Vijaypura

ಎಸ್‌ಐಆರ್‌ಗೆ ವಿಜಯಪುರದಲ್ಲಿ ರಾಜಕೀಯ ಜಟಾಪಟಿ: 18 ಸಾವಿರ ಫಾರ್ಮ್‌-7 ಅರ್ಜಿ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು!

Share

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. 18 ಸಾವಿರ ಸಂಶಯಾಸ್ಪದ ಮತದಾರರ ಹೆಸರು ಪತ್ತೆಯಾಗಿದೆ ಎಂದು ಯತ್ನಾಳ ಬೆಂಬಲಿಗರು ಹೇಳಿಕೊಂಡು, ಫಾರ್ಮ್‌-7 ಮೂಲಕ ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮೂಹಿಕ ವಾಗಿ ಫಾರ್ಮ್‌-7 ಅರ್ಜಿ ಸಲ್ಲಿಸಿರುವುದು ನಿಯಮಬಾಹಿರ ಎಂದು ಆರೋಪಿಸಿದೆ. ಇದೀಗ ಎಸ್‌ಐಆರ್‌ ವಿಚಾರದಲ್ಲಿ ಆರೋಪ–ಪ್ರತ್ಯಾರೋಪ ಜೋರಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು… ವಿಜಯಪುರ ನಗರ ಕ್ಷೇತ್ರದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ವೇಳೆ 18 ಸಾವಿರ ಸಂಶಯಾಸ್ಪದ ಮತದಾರರ ಹೆಸರುಗಳನ್ನು ಗುರುತಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರು ಆರೋಪಿಸಿದ್ದಾರೆ. ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಯತ್ನಾಳ ಬೆಂಬಲಿಗರು ಚುನಾವಣಾ ಆಯೋಗಕ್ಕೆ ಫಾರ್ಮ್‌-7 ಮೂಲಕ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಮುಖಂಡರ ಗುಂಡಾಗಿರಿಗೆ ತಾವು ಅಂಜುವುದಿಲ್ಲ, ನಮ್ಮ ಜೊತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದ್ದಾರೆ ಎಂದು ಬೆಂಬಲಿಗರು ಹೇಳಿಕೆ ನೀಡಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಸಂಶಯಾಸ್ಪದ ಮತದಾರರ ಹೆಸರುಗಳನ್ನು ಪರಿಶೀಲಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಇನ್ನೂ ಯತ್ನಾಳ ಬೆಂಬಲಿಗರ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ವಿಜಯಪುರ ನಗರದಲ್ಲಿ 18 ಸಾವಿರ ಫಾರ್ಮ್‌-7 ಅರ್ಜಿ ಗಳನ್ನು ಸಾಮೂಹಿಕವಾಗಿ ಸಲ್ಲಿಸಿರುವುದು ನಿಯಮ ಬಾಹಿರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್‌ ಶೇಖ್‌ ಆಗ್ರಹಿಸಿದ್ದಾರೆ. ಬಿಜೆಪಿಯಿಂದ ಅಕ್ರಮ ವಾಗಿ ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಪಾಲಿಕೆ ಸದಸ್ಯರು ಸಲ್ಲಿಸಿರುವ ಸಾಮೂಹಿಕ ಅರ್ಜಿಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟಿಸಿದೆ ಎಂದು ಹೇಳಿದ ಇರ್ಫಾನ್‌ ಶೇಖ್‌, ಉಚ್ಚಾಟಿತ ಶಾಸಕರೊಂದಿಗೆ ಕೆಲ ಬಿಜೆಪಿ ಪಾಲಿಕೆ ಸದಸ್ಯರು ಗುರುತಿಸಿ ಕೊಳ್ಳುತ್ತಿರುವುದನ್ನೂ ಪ್ರಶ್ನಿಸಿದ್ದಾರೆ. ಇವರು ಬಿಜೆಪಿಯ ಪಾಲಿಕೆ ಸದಸ್ಯರೋ ಅಥವಾ ಉಚ್ಚಾಟಿತ ಶಾಸಕ ಯತ್ನಾಳ ಅವರ ಬೆಂಬಲಿಗರೋ? ಎಂದು ಪ್ರಶ್ನಿಸಿರುವ ಕಾಂಗ್ರೆಸ್‌, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.

ಹೀಗೆ ವಿಜಯಪುರ ನಗರದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಇದೀಗ ರಾಜಕೀಯ ಸಂಘರ್ಷದ ವೇದಿಕೆ ಯಾಗಿದೆ. ಒಂದೆಡೆ ಸಂಶಯಾಸ್ಪದ ಮತದಾರರ ಹೆಸರುಗಳನ್ನು ಪರಿಶೀಲಿಸುವ ನೆಪದಲ್ಲಿ ಫಾರ್ಮ್‌-7 ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ಯತ್ನಾಳ ಬೆಂಬಲಿಗರ ವಾದವಾದರೆ, ಮತ್ತೊಂದೆಡೆ ಸಾಮೂಹಿಕ ಅರ್ಜಿಗಳೇ ನಿಯಮ ಬಾಹಿರ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಎಸ್‌ಐಆರ್‌ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿರುವುದು, ಈ ವಿವಾದ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!