ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಎರಡನೇ ದಿನ ಮೇಳಕ್ಕೆ ಜನಸಾಗರ ಹರಿದುಬಂದಿದ್ದು, ಮೇಳದಲ್ಲಿ ಕಾರಾಗೃಹದ ಕೈದಿಗಳು ಸಿದ್ಧಪಡಿಸಿದ ಬಟ್ಟೆ ಹಾಗೂ ಸಿಹಿ ತಿನಿಸುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುವುದರ ಜೊತೆಗೆ ಜನರ ಗಮನ ಸೆಳೆಯುತ್ತಿದೆ.


ಹೌದು, ಧಾರವಾಡ ಕೃಷಿ ವಿವಿ ಆವರಣದಲ್ಲಿ ಕಳೆದ ಶನಿವಾರದಿಂದ 2026-27 ಸಾಲಿನ ಕೃಷಿ ಮೇಳಕ್ಕೆ ಚಾಲನೆ ನೀಡಲಾಗಿದ್ದು, ರೈತರಿಗೆ ಉಪಯುಕ್ತವಾದ ನೂರಾರು ಸ್ಟಾಲ್‌ಗಳ ಪ್ರದರ್ಶನದ ಜೊತೆಗೆ ಮಾರಾಟ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಘುಪತಿ ಸಿ.ಜೆ. ಅವರಿಂದ ಸ್ಟಾಲ್ ತೆರೆಯಲಾಗಿದ್ದು, ಕೈದಿಗಳು ತಯಾರಿಸಿರುವ ಶುದ್ಧವಾದ ಬಟ್ಟೆ ಮತ್ತು ಸಿಹಿ ತಿನಿಸುಗಳಿಗೆ ಭಾರಿ ಬೇಡಿಕೆ ಬಂದಿದೆ. 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ಕೈದಿಗಳು ಸಿದ್ಧಪಡಿಸಿದ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿವೆ.

ಜೈಲಿನಲ್ಲಿ ಕೇವಲ ಶಿಕ್ಷೆ ನೀಡುವುದಲ್ಲದೆ, ಕೌಶಲ್ಯಾಭಿವೃದ್ದಿ ತರಬೇತಿಯನ್ನು ಕಾರಾಗೃಹದಲ್ಲಿ ನೀಡಲಾಗುತ್ತಿದೆ. ಇನ್ನೂ ಕೈದಿಗಳು ಬಿಡುಗಡೆಯಾದ ನಂತರ ತಮ್ಮ ಜೀವನ ಕಟ್ಟಿಕೊಳ್ಳಲು ಈ ತರಬೇತಿ ದಾರಿದೀಪವಾಗಬೇಕು ಎಂಬುದು ಇದರ ಉದ್ದೇಶವಾಗಿದೆ. ಜೈಲು ಅಧಿಕಾರಿಯ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

