ಮೂವರು ಮಕ್ಕಳಿದ್ದರೂ ಗಂಡನನ್ನೇ ಕೊಲೆ ಮಾಡಿಸಿದ ಆರೋಪ ಪತ್ನಿ ಮೇಲೆ ಕೇಳಿಬಂದಿದೆ. ಗಂಡನ ಕೊಲೆ ಸಂಚಿನಲ್ಲಿ ಪತ್ನಿಯೊಂದಿಗೆ ಆಕೆಯ ಸ್ವಂತ ತಮ್ಮ ಕೂಡ ಭಾಗಿಯಾಗಿದ್ದಾನೆ. ಮೂವರು ಸೇರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಇತ್ತ ತಂದೆ ಕೊಲೆಯಾದರೆ, ತಾಯಿ ಜೈಲು ಪಾಲಾಗಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಅನಾಥವಾಗಿವೆ. ಹಾಗಾದ್ರೆ ಈ ಘಟನೆ ನಡೆದಿದ್ದಾದರೂ ಎಲ್ಲಿ..? ಏನಿದು ಕೊಲೆ ಪ್ರಕರಣ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಇನ್ನೂ ಪತಿಯನ್ನೇ ಕೊಲೆ ಮಾಡಲು ಪತ್ನಿ ಸಂಚು ರೂಪಿಸಿ ಕೊಲೆ ಮಾಡಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ತನ್ನ ಸ್ವಂತ ತಮ್ಮನ ಸಹಾಯ ಪಡೆದು ಗಂಡನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಕ್ಯಾನಲ್ ಬಳಿ ಸೆಪ್ಟೆಂಬರ್ 11ರಂದು ಶವವೊಂದು ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಇದು ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ 42 ವರ್ಷದ ಸಿದ್ದಪ್ಪ ಇಂಡಿ ಎಂಬಾತನ ಶವ ಎಂದು ಗೊತ್ತಾಗಿದೆ. ಕತ್ತು ಕೊಯ್ದು ಸಿದ್ದಪ್ಪನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರಿಗೆ ಕೊಲೆಯ ಹಿಂದೆ ಆತನ ಪತ್ನಿ ಹಾಗೂ ಆಕೆಯ ತಮ್ಮನ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಮೃತ ಸಿದ್ದಪ್ಪ ಇಂಡಿ ಒಕ್ಕಲುತನ ಹಾಗೂ ಟ್ರ್ಯಾಕ್ಟರ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಸಿದ್ದಪ್ಪ ಹಾಗೂ ಆತನ ಪತ್ನಿ ರೇಣುಕಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ರೇಣುಕಾ ಪದೇ ಪದೇ ತವರು ಮನೆಗೆ ಹೋಗುತ್ತಿದ್ದಳು. ಕಳೆದು ಒಂದು ತಿಂಗಳ ಹಿಂದಷ್ಟೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದಳು ಎನ್ನಲಾಗಿದೆ. ಆದರೆ ಸೆಪ್ಟೆಂಬರ್ 11ರಂದು ಸಿದ್ದಪ್ಪ ತನ್ನ ಪತ್ನಿಯ ತಮ್ಮ ಈರಪ್ಪನೊಂದಿಗೆ ಟ್ರ್ಯಾಕ್ಟರ್ ನೋಡಲು ಮುಧಭಾವಿಗೆ ಹೋಗುತ್ತಿದ್ದೇನೆ ಎಂದು ತಾಯಿಗೆ ಹೇಳಿ ಮನೆಯಿಂದ ಹೊರಟಿದ್ದ. ಬಳಿಕ ಸಿದ್ದಪ್ಪ ಮನೆಗೆ ವಾಪಸ್ ಆಗದೇ, ಮರುದಿನ ಕವಲಗಿ ಗ್ರಾಮದ ಕ್ಯಾನಲ್ ಬಳಿ ಶವವಾಗಿ ಪತ್ತೆಯಾಗಿದ್ದ. ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಮಗೆ ಸಿಕ್ಕಿದ ಸುಳಿವುಗಳ ಆಧಾರದ ಮೇಲೆ ಮೃತನ ಪತ್ನಿ ರೇಣುಕಾ ಇಂಡಿ ಹಾಗೂ ಆಕೆಯ ತಮ್ಮ ಈರಪ್ಪ ಸೇರಿದಂತೆ ವಿಠಲ ಕೆರೂರ ಎಂಬುವವರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ನಲ್ಲಿ, ಹೆಂಡತಿ ಹಾಗೂ ಆಕೆಯ ತಮ್ಮನಿಂದಲೇ ಗಂಡನ ಕೊಲೆ ನಡೆದಿದೆ ಎಂಬ ಆರೋಪ ಈ ಪ್ರಕರಣದಲ್ಲಿ ಕೇಳಿಬಂದಿದೆ. ಪತಿಯನ್ನೇ ಕೊಲೆ ಮಾಡಿಸಿದ ಆರೋಪದಡಿ ಪತ್ನಿ ಜೈಲು ಪಾಲಾಗಿದ್ದರೆ, ಆಕೆಯ ತಮ್ಮ ಸೇರಿದಂತೆ ಮತ್ತೋರ್ವ ಆರೋಪಿಯೂ ಬಂಧನ ಕ್ಕೊಳಗಾಗಿದ್ದಾನೆ. ಆದರೆ ಈ ಘಟನೆಯಿಂದ ತಂದೆಯನ್ನು ಕಳೆದುಕೊಂಡ ಮೂವರು ಮಕ್ಕಳು ಮಾತ್ರ ದಿಕ್ಕೇ ತೋಚದಂತಾಗಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
