Vijaypura

ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ: ಸಂಸದ ಗೋವಿಂದ ಕಾರಜೋಳ ಆರೋಪ

Share

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ವಿಜಯಪುರ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಐಆರ್‌ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಎದುರಿಸುವ ಶಕ್ತಿ ಇಲ್ಲದ ಕಾರಣ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಜ್ಞಾನೇಶ್ ಕುಮಾರ್ ಅವರು ದಲಿತ ಸಮುದಾಯಕ್ಕೆ ಸೇರಿದ ಐಎಎಸ್ ಅಧಿಕಾರಿ. ಅವರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ದಲಿತ ಅಧಿಕಾರಿ ಮುಖ್ಯ ಚುನಾವಣಾ ಆಯುಕ್ತರಾಗಿರುವುದನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಾರಜೋಳ ಹೇಳಿದರು. ಎಸ್‌ಐಆರ್‌ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ಸೆ.25ರಂದು ರಾಜ್ಯ ಚುನಾವಣಾ ಆಯೋಗಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಕರೆ ನೀಡಿತ್ತು. “ನಾನು ಕಾರಜೋಳ ಗ್ರಾಮದವನು. ಹಿಂದೆ ನನ್ನ ಮತದಾನ ಅಲ್ಲಿಯೂ ಇತ್ತು, ಇಲ್ಲಿಯೂ ಇತ್ತು. ಎಸ್‌ಐಆರ್‌ ಮೂಲಕ ಅಂತಹ ಮತದಾರರ ಹೆಸರುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಆದರೆ ಇದನ್ನೇ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ” ಎಂದು ಕಾರಜೋಳ ಹೇಳಿದರು. ರಾಹುಲ್ ಗಾಂಧಿ ಅವರು ‘ವೋಟ್ ಚೋರಿ’ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ವಯನಾಡಿನಲ್ಲಿ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಹೇಗೆ ಗೆದ್ದು ಬಂದರು ಎಂದು ಪ್ರಶ್ನಿಸಿದ ಅವರು, ಎಸ್‌ಐಆರ್‌ ಸರಿಯಿಲ್ಲ ಎನ್ನುವ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದನ್ನೂ ಪ್ರಶ್ನಿಸಬೇಕು ಎಂದರು. ಗಾಂಧಿ ಕುಟುಂಬ ದೇಶದ ಅಧಿಕಾರ ತಮ್ಮ ಕೈಯಲ್ಲೇ ಇರಬೇಕು ಎಂದುಕೊಂಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆ ರಾಜಕೀಯ ಪ್ರಾಬಲ್ಯವನ್ನು ಅಂತ್ಯಗೊಳಿಸಿದ್ದಾರೆ ಎಂದು ಕಾರಜೋಳ ಹೇಳಿದರು. ಕೊರೋನಾ ಸಂದರ್ಭದಲ್ಲಿ ಭಾರತದಲ್ಲೇ ಲಸಿಕೆ ಅಭಿವೃದ್ಧಿಪಡಿಸಿ, ಹಲವು ದೇಶಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಲಸಿಕೆ ನೀಡಲಾಯಿತು. ಆದರೆ ಕಾಂಗ್ರೆಸ್ ಜನರನ್ನು ಲಸಿಕೆ ಪಡೆಯದಂತೆ ದಾರಿ ತಪ್ಪಿಸಿತು ಎಂದು ಅವರು ಆರೋಪಿಸಿದರು. ಹಾವನೂರು, ಕಾಂತರಾಜ್ ಹಾಗೂ ಮಧುಸೂದನ್ ವರದಿಗಳ ಕುರಿತು ಮಾತನಾಡಿದ ಕಾರಜೋಳ, ಹಿಂದುಳಿದವರು ಹಾಗೂ ದಲಿತರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಗಳು ಏನು ಮಾಡಿವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ದಲಿತರಿಗಾಗಿ ಮೀಸಲಿಟ್ಟ ಹಣದ ದುರ್ಬಳಕೆಯಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಬೇಕು. ಪೌರ ಕಾರ್ಮಿಕರ ಮಕ್ಕಳಿಗೂ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾಗಿರುವ ರೈತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದರು.

ಗೋಶಾಲೆಗಳನ್ನು ಆರಂಭಿಸಬೇಕು. ಇನ್ನೊಂದು ಮಳೆ ಬಂದರೆ ಬಿತ್ತನೆಗೆ ಅವಕಾಶ ಸಿಗಬಹುದು; ಇಲ್ಲವಾದರೆ ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮುಗಳು ಹಾನಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು. “ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಸಾಲ ಮನ್ನಾ, ಉದ್ಯೋಗ ಖಾತ್ರಿ ಹಾಗೂ ಗೋಶಾಲೆಗಳ ಮೂಲಕ ನೆರವು ನೀಡಬೇಕು” ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

Tags:

error: Content is protected !!