Athani

ಆರೋಗ್ಯ ಸಮಸ್ಯೆಯ ನಡುವೆಯೂ ರೈತರಿಗಾಗಿ ಧ್ವನಿ ಎತ್ತಿದ ಶಾಸಕ ರಾಜು ಕಾಗೆ

Share

ಸರ್ಕಾರದಿಂದ ಸ್ಪಂದನೆ; ಕಾಗವಾಡ ಸೇರಿದಂತೆ ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಬರಪೀಡಿತ ತಾಲೂಕು ಸ್ಥಾನಮಾನ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಇದೀಗ ರೈತರಿಗೆ ಸರ್ಕಾರದ ನೆರವಿನ ನಿರೀಕ್ಷೆ ಮೂಡಿದೆ.

ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಆರಂಭಿಕ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಸ್ಥಾನ ದೊರೆತಿರಲಿಲ್ಲ. ಇದರಿಂದಾಗಿ ಈ ಭಾಗದ ರೈತರಲ್ಲಿ ಆತಂಕ ಮೂಡಿತ್ತು.

ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವರು ಆರೋಗ್ಯ ಸಮಸ್ಯೆಯ ನಡುವೆಯೂ ತಮ್ಮ ಕ್ಷೇತ್ರದ ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮುಂದಾಗಿದ್ದರು.

ಕಾಗವಾಡ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಎದುರಾಗಿರುವ ತೊಂದರೆ, ಬೆಳೆ ನಷ್ಟ ಹಾಗೂ ರೈತರ ಸಂಕಷ್ಟವನ್ನು ವಿವರಿಸಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ವಿಶೇಷವಾಗಿ, ಕಾಗವಾಡ ತಾಲೂಕಿನ ವಾಸ್ತವಿಕ ಬರ ಪರಿಸ್ಥಿತಿಯನ್ನು ಅಧಿಕಾರಿಗಳ ಮೂಲಕ ಸಮಗ್ರವಾಗಿ ಅವಲೋಕನ ನಡೆಸಿ, ರೈತರಿಗೆ ಅಗತ್ಯವಿರುವ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ರಾಜು ಕಾಗೆ ಅವರು ಮನವಿ ಮಾಡಿದ್ದರು.

ಶಾಸಕರ ಮನವಿಗೆ ಇದೀಗ ಸರ್ಕಾರ ಸ್ಪಂದಿಸಿದೆ.

ಕಾಗವಾಡ ಸೇರಿದಂತೆ ಬೆಳಗಾವಿ ಜಿಲ್ಲೆಯ ಇನ್ನೂ ಮೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದರೊಂದಿಗೆ ಕಾಗವಾಡ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕುಗಳ ರೈತರಿಗೆ ಸರ್ಕಾರದ ಬರಪರಿಹಾರ ಹಾಗೂ ವಿವಿಧ ಸೌಲಭ್ಯಗಳು ದೊರೆಯುವ ನಿರೀಕ್ಷೆ ಹೆಚ್ಚಾಗಿದೆ.

ಆರೋಗ್ಯ ಸಮಸ್ಯೆಯ ನಡುವೆಯೂ ಕ್ಷೇತ್ರದ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು, ಬರಪೀಡಿತ ತಾಲೂಕುಗಳ ಪಟ್ಟಿಗೆ ಕಾಗವಾಡವನ್ನು ಸೇರಿಸುವಂತೆ ನಿರಂತರವಾಗಿ ಪ್ರಯತ್ನ ನಡೆಸಿದ ಶಾಸಕ ರಾಜು ಕಾಗೆ ಅವರ ಮನವಿಗೆ ಸರ್ಕಾರ ಸ್ಪಂದಿಸಿರುವುದು ಇದೀಗ ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಬರದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು ಯಾವ ರೀತಿಯಲ್ಲಿ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!