Vijaypura

ಬಾರದ ಮಳೆಗೆ ಕತ್ತೆಗಳ ಮದುವೆ; ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ

Share

ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವು ದರಿಂದ ಬರದ ಛಾಯೆ ಆವರಿಸಿದೆ. ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ರೈತರು ಆಕಾಶದತ್ತ ಮುಖ ಮಾಡು ವಂತಾಗಿದೆ. ವರುಣನ ಕೃಪೆಗಾಗಿ ಗ್ರಾಮೀಣ ಭಾಗದಲ್ಲಿ ಹಲವು ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗಲಾಗುತ್ತಿದೆ. ರೈತರು ಮಳೆಗಾಗಿ ಕತ್ತೆಗಳ ಮದುವೆ ನೆರವೇರಿಸಿ, ಅದ್ಧೂರಿ ಮೆರವಣಿಗೆ ನಡೆಸಲಾಗಿದೆ. ಮಳೆ ಬರಲಿ, ಬರದ ಬಿಸಿ ದೂರವಾಗಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ನಡೆಸಿದ ಈ ವಿಶೇಷ ಆಚರಣೆ ಹೇಗಿತ್ತು..?ಇಲ್ಲಿದೆ ಈ ಕುರಿತು ಒಂದು ವರದಿ…

ಮಳೆ ಕೈಕೊಟ್ಟಿದೆ…
ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿಲ್ಲ… ಹೊಲಗಳಲ್ಲಿ ಹಸಿರು ಚಿಗುರಬೇಕಾದ ಸಮಯದಲ್ಲಿ ಒಣಗುವ ಆತಂಕ… ಇತ್ತ ಜಾನುವಾರುಗಳಿಗೂ ನೀರು, ಮೇವಿನ ಕೊರತೆ… ಹೌದು… ವಿಜಯಪುರ ಜಿಲ್ಲೆಯಲ್ಲಿ ಬರದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮಳೆಯ ನಿರೀಕ್ಷೆ ಯಲ್ಲಿದ್ದಾರೆ. ವರುಣನ ಕೃಪೆಗಾಗಿ ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗಲಾಗುತ್ತಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಕೂಡ ಮಳೆಗಾಗಿ ವಿಶೇಷ ಆಚರಣೆ ನಡೆಸಲಾಯಿತು. ಗ್ರಾಮದ ಶ್ರೀ ಸಂಗಮನಾಥ ದೇವಾಲಯದ ಆವರಣದಲ್ಲಿ ಕತ್ತೆಗಳ ಮದುವೆ ನೆರವೇರಿಸಿ, ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಮದುವೆ ಸಂಪ್ರದಾಯದಂತೆ ಕತ್ತೆಗಳನ್ನು ಅಲಂಕರಿಸಿ, ವಿವಿಧ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಕತ್ತೆಗಳ ಕಾಲು ಮುಟ್ಟಿ, ಮಳೆ ಸುರಿದು ನಾಡು ಸುಭಿಕ್ಷವಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು. ನಂತರ ವಾದ್ಯಮೇಳದೊಂದಿಗೆ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಮನೆಗಳ ಮುಂದೆ ಉಡಿಯಕ್ಕಿ ಇಟ್ಟು, ಆರತಿ ಬೆಳಗಿ ಕತ್ತೆಗಳಿಗೆ ಪೂಜೆ ಸಲ್ಲಿಸಿದರು. ಮಳೆ ಬಂದು ಹೊಲಗಳು ಹಸಿರಾಗಲಿ…
ರೈತರ ಸಂಕಷ್ಟ ದೂರವಾಗಲಿ…
ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಲಿ…
ಎಂಬ ಆಶಯದೊಂದಿಗೆ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇನ್ನೂ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬುದು ನಮ್ಮ ಹಿರಿಯರ ಕಾಲದಿಂದಲೂ ಇರುವ ನಂಬಿಕೆ. ಈ ವರ್ಷ ಮಳೆ ಕೈಕೊಟ್ಟಿರುವುದರಿಂದ ರೈತರು ಹಾಗೂ ಜಾನುವಾರುಗಳು ಸಂಕಷ್ಟದಲ್ಲಿವೆ. ಮಳೆ ಸುರಿದು ರೈತರಿಗೆ ಅನುಕೂಲವಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಎಂಬ ಆಶಯದಿಂದ ಈ ಸಂಪ್ರದಾಯವನ್ನು ಆಚರಿಸಿದ್ದಾರೆ. ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವೈಜ್ಞಾನಿಕವಾಗಿ ಮಳೆಯೊಂದಿಗೆ ಈ ಆಚರಣೆಗೆ ನೇರ ಸಂಬಂಧವಿಲ್ಲವಾದರೂ, ಮಳೆಯ ನಿರೀಕ್ಷೆಯಲ್ಲಿರುವ ಗ್ರಾಮಸ್ಥರು ತಮ್ಮ ಸಾಂಪ್ರದಾಯಿಕ ನಂಬಿಕೆಯಂತೆ ಆಚರಣೆ ನಡೆಸಿದ್ದಾರೆ. ಆಚರಣೆಯ ಬಳಿಕ ಗ್ರಾಮಸ್ಥರಿಗೆ ಸಾಮೂಹಿಕ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಒಟ್ಟಿನಲ್ಲಿ ಮಳೆಗಾಗಿ ಇಡೀ ಗ್ರಾಮವೇ ಒಂದಾಗಿ ಪ್ರಾರ್ಥನೆ ಸಲ್ಲಿಸಿತು.

ಒಟ್ಟಾರೆ, ಮಳೆಗಾಗಿ ರೈತರು… ಒಂದಲ್ಲ, ಹಲವು ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಕತ್ತೆಗಳ ಮದುವೆ, ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಹೀಗೆ ವರುಣನಿಗಾಗಿ ಗ್ರಾಮಸ್ಥರ ಕೋರಿಕೆ ಮುಂದುವರಿದಿದೆ.
ಈ ಆಚರಣೆಗಳ ಬೆನ್ನಲ್ಲೇ ವರುಣ ಕೃಪೆ ತೋರಿ, ಮಳೆ ಸುರಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಲಿದ್ದಾನಾ..? ಎಂಬ ನಿರೀಕ್ಷೆ ಇದೀಗ ಎಲ್ಲರಲ್ಲೂ ಮೂಡಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!