Chikkodi

ಪುರಸಭೆ ಅಧಿಕಾರಿಗಳ ಫೋನ್ ಪೇ ಚೆಕ್ ಮಾಡಿದ ಉಪಲೋಕಾಯುಕ್ತ ಬಿ.ವೀರಪ್ಪ: ಅಧಿಕಾರಿಗಳಿಗೆ ತೀವ್ರ ತರಾಟೆ

Share

ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಧಿಕಾರಿಗಳ ಕಾರ್ಯವೈಖರಿ ಹಾಗೂ ವೇತನದ ವಿವರಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಫೋನ್ ಪೇ (PhonePe) ಖಾತೆಗಳನ್ನು ತಪಾಸಣೆ ನಡೆಸುವ ಮೂಲಕ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪುರಸಭೆ ಅಧಿಕಾರಿಗಳು ಪಡೆಯುತ್ತಿರುವ ಹೆಚ್ಚಿನ ಸಂಬಳ ಹಾಗೂ ಅವರ ಖಾತೆಗೆ ಬರುತ್ತಿರುವ ಹಣದ ಮೂಲದ ಕುರಿತು ಅನುಮಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಸ್ವತಃ ಅಧಿಕಾರಿಗಳ ಮೊಬೈಲ್ ಪಡೆದು ಫೋನ್ ಪೇ ವಿವರಗಳನ್ನು ಪರಿಶೀಲಿಸಿದರು.

ಖಾತೆಯಲ್ಲಿ ₹1 ಲಕ್ಷಕ್ಕೂ ಹೆಚ್ಚು ಹಣದ ವ್ಯವಹಾರ ನಡೆದಿರುವುದನ್ನು ಕಂಡು, “ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬಂತು?” ಎಂದು ಬಿ. ವೀರಪ್ಪ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ನನ್ನ ಮಗಳು ಖಾತೆಗೆ ಹಣ ಹಾಕಿದ್ದಾಳೆ” ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಮತ್ತೊಬ್ಬ ಅಧಿಕಾರಿಯ ಖಾತೆಯಲ್ಲೂ ಸಹ ₹1 ಲಕ್ಷಕ್ಕೂ ಅಧಿಕ ಹಣ ಇನ್‌ಕಮಿಂಗ್ (ಜಮಾ) ಆಗಿರುವುದು ಕಂಡುಬಂತು.

ಅಧಿಕಾರಿಗಳ ಅನುಮಾನಾಸ್ಪದ ಹಣಕಾಸಿನ ವ್ಯವಹಾರ ಕಂಡು ತೀವ್ರ ಕೆಂಡಾಮಂಡಲರಾದ ಉಪಲೋಕಾಯುಕ್ತರು, ಸ್ಥಳದಲ್ಲಿದ್ದ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡರು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ನೌಕರರ ವೇತನದ ಸಂಪೂರ್ಣ ಮಾಹಿತಿಯನ್ನು ತಕ್ಷಣ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಉಪಲೋಕಾಯುಕ್ತರ ಈ ದಿಢೀರ್ ದಾಳಿ ಹಾಗೂ ಖುದ್ದು ಫೋನ್ ಪೇ ಪರಿಶೀಲನೆಯಿಂದ ಚಿಕ್ಕೋಡಿ ಪುರಸಭೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

Tags:

error: Content is protected !!