Belagavi

ಉಗಾರ ಖುರ್ದ ಪುರಸಭೆ ಹಗರಣ: ಲೋಕಾಯುಕ್ತ ಭೀತಿಯಿಂದ ಎಚ್ಚೆತ್ತ ಅಧಿಕಾರಿಗಳು

Share

ಕಾಮಗಾರಿ ಮಾಡದೆಯೇ ನಕಲಿ ಬಿಲ್ ಎಬ್ಬಿಸಿ ಸರ್ಕಾರದ ಹಣ ಲೂಟಿ ಮಾಡಿದ್ದ ಉಗಾರ ಖುರ್ದ ಪುರಸಭೆಯ ಅಧಿಕಾರಿಗಳ ಭ್ರಷ್ಟಾಟ ಬಯಲಾಗಿದೆ. ಲೋಕಾಯುಕ್ತರು ಚಿಕ್ಕೋಡಿಗೆ ಆಗಮಿಸುತ್ತಿರುವ ಸುದ್ಧಿ ತಿಳಿದು ಬೆಚ್ಚಿಬಿದ್ದ ಅಧಿಕಾರಿಗಳು, ಮುಖಂಡರ ಎಚ್ಚರಿಕೆಯ ಬೆನ್ನಲ್ಲೇ ಈಗ ಆತುರಾತುರವಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವ ಅಚ್ಚರಿಯ ಘಟನೆ ನಡೆದಿದೆ.

ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಎಸ್.ಡಬ್ಲ್ಯೂ.ಎಂ (SWM) ಸೈಟ್‌ನಲ್ಲಿ 2022ನೇ ಸಾಲಿನಲ್ಲಿ ಎಲೆಕ್ಟ್ರಿಕಲ್ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳ ಅಳವಡಿಕೆಗಾಗಿ ಟೆಂಡರ್ ಕರೆಯಲಾಗಿತ್ತು. ಆದರೆ, 2023ರಲ್ಲಿಯೇ ಕಾಮಗಾರಿ ಮುಕ್ತಾಯಗೊಂಡಿದೆ (Completion Report) ಎಂದು ಸುಳ್ಳು ವರದಿ ಸೃಷ್ಟಿಸಿ, ಅಳತೆ ಪುಸ್ತಕದಲ್ಲಿ (MB) ನಮೂದಿಸಿ ಅಧಿಕಾರಿಗಳು ಸರ್ಕಾರದ ಹಣವನ್ನು ಲಪಟಾಯಿಸಿದ್ದರು. ವಾಸ್ತವದಲ್ಲಿ ಅಲ್ಲಿ ಯಾವುದೇ ಟ್ರಾನ್ಸ್‌ಫಾರ್ಮರ್ ಅಳವಡಿಸಿರಲಿಲ್ಲ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ವಿವರ ಕೇಳಿದಾಗ ಪುರಸಭೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ನುಣುಚಿಕೊಂಡಿದ್ದರು. ಈ ಭ್ರಷ್ಟಾಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪರಿಸರ ರಕ್ಷಣೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರಾದ ಸುನಿಲ್ ಉನ್ನಾಳೆ, ಯೋಗೇಶ್ ಕುಂಬಾರ, ಚಂದ್ರಶೇಖರ ಗೂಳಪ್ಪನವರ ಹಾಗೂ ಮಹೇಶ್ ಮೇಟಕರಿ ಅವರು, ಮಾನ್ಯ ಉಪಲೋಕಾಯುಕ್ತರು ಚಿಕ್ಕೋಡಿಗೆ ಭೇಟಿ ನೀಡುತ್ತಿರುವ ವಿಷಯ ತಿಳಿದು ಈ ಎಲ್ಲ ಅಕ್ರಮಗಳನ್ನು ನೇರವಾಗಿ ಲೋಕಾಯುಕ್ತರ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದ್ದರು. ಹೋರಾಟಗಾರರ ಈ ಎಚ್ಚರಿಕೆಯಿಂದ ನಡುಗಿಹೋದ ಭ್ರಷ್ಟ ಅಧಿಕಾರಿಗಳು, ತರಾತುರಿಯಲ್ಲಿ ಎಚ್ಚೆತ್ತುಕೊಂಡು ಇಂದು ಅದೇ ಜಾಗದಲ್ಲಿ ಹೊಸದೊಂದು ಟ್ರಾನ್ಸ್‌ಫಾರ್ಮರ್ ಅನ್ನು ಅಳವಡಿಸುವ ಕಾರ್ಯ ಮಾಡಿದ್ದಾರೆ. ಇದು ಪುರಸಭೆ ಅಧಿಕಾರಿಗಳ ಕೃತ್ಯ ಹಾಗೂ ಭ್ರಷ್ಟಾಚಾರಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

Tags:

error: Content is protected !!