State

ಆರಂಭಗೊಂಡ 5 ನಿಮಿಷದಲ್ಲೇ 10 ನಿಮಿಷ ಮುಂದೂಡಲ್ಪಟ್ಟ ವಿಧಾನಸಭೆ ಕಲಾಪ!!!

Share

ಹಿರಿಯ ನಟ ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಸಿಎಂ, ಡಿಸಿಎಂ ಹಾಗೂ ಸಚಿವರು ಗೈರುಹಾಜರಾಗಿರುವುದನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಕಲಾಪವೇ ಕೆಲಕಾಲ ಸ್ತಬ್ಧವಾಯಿತು.

ವಿಧಾನಸಭೆ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹಿರಿಯ ನಟ ಅನಂತನಾಗ್ ಅವರಿಗೆ ಸದನದಲ್ಲಿ ಅಧಿಕೃತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮವಿತ್ತು. ಆದರೆ ಈ ಪ್ರಮುಖ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಬಹುತೇಕ ಸಚಿವರು ಸದನದಲ್ಲಿ ಗೈರುಹಾಜರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಉಪನಾಯಕ ಅರವಿಂದ ಬೆಲ್ಲದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಇದು ಅನಂತನಾಗ್ ಅವರಂತಹ ದಿಗ್ಗಜನಿಗೆ ತೋರಿದ ಸ್ಪಷ್ಟ ಅಗೌರವ” ಎಂದು ಆಕ್ರೋಶ ಹೊರಹಾಕಿದರು.

ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ವಿಪಕ್ಷ ಸದಸ್ಯರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡು “ಪೇಮೆಂಟ್ ಇದ್ದವರು ಹೊರಗೆ ಹೋಗಲಿ, ಪೇಮೆಂಟ್ ಇಲ್ಲದವರು ಕುಳಿತುಕೊಳ್ಳಲಿ” ಎಂದು ವ್ಯಂಗ್ಯವಾಡಿದರೆ, ಆಡಳಿತ ಪಕ್ಷದ ಸದಸ್ಯರು “ಯಾರಿಗೆ ಪೇಮೆಂಟ್ ಕೊಟ್ಟಿದ್ದೇವೆ ಎಂಬುದನ್ನು ಸಾಬೀತುಪಡಿಸಿ” ಎಂದು ಪಟ್ಟು ಹಿಡಿದು ಸಭಾತ್ಯಾಗದ ಎಚ್ಚರಿಕೆ ನೀಡಿದರು.
ಸಚಿವರ ಗೈರು ಹಾಗೂ ಇరు ಪಕ್ಷಗಳ ತೀವ್ರ ಮಾತಿನ ಸಮರದಿಂದ ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ, ಸಭಾಧ್ಯಕ್ಷರು ಅಧಿವೇಶನವನ್ನು ತಕ್ಷಣವೇ ಹತ್ತು ನಿಮಿಷಗಳ ಕಾಲ ಮುಂದೂಡಿದರು.

Tags:

error: Content is protected !!