ಚಿಕ್ಕೋಡಿ:ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಇಂಗಳಿ, ಯಡೂರ, ಚಂದೂರ ಹಾಗೂ ಮಾಂಜರಿ ಗ್ರಾಮಗಳಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನದಲ್ಲಿ ಸವಳು-ಜವಳು ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರದ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದು ಶಾಸಕ ಗಣೇಶ್ ಹುಕ್ಕೇರಿ ಅವರು ಹೇಳಿದರು.

ಚಿಕ್ಕೋಡಿಯ ಇಂದಿರಾ ನಗರದಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೃಷಿ ಇಲಾಖೆಯ ‘ಸಮಗ್ರ ಕೃಷಿ ಪದ್ಧತಿಯ ಶ್ರೇಷ್ಠತಾ ಕೇಂದ್ರ’ದ ನೂತನ ಕಟ್ಟಡವನ್ನು ಉದ್ಘಾಟಿಸಿ, ಜಿಲ್ಲಾ ಮಟ್ಟದ ‘ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ’ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದ ಅತಿ ಉದ್ದವಾದ ಕೃಷ್ಣಾ ನದಿ ನಮ್ಮ ತಾಲೂಕಿನಲ್ಲಿ ಹರಿಯುತ್ತಿರುವುದು ನಮ್ಮೆಲ್ಲರ ಭಾಗ್ಯ. ಚಿಕ್ಕೋಡಿ ತಾಲೂಕಿನಲ್ಲಿ ಡ್ರಿಪ್ ಇರಿಗೇಶನ್ ಯೋಜನೆ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಡಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಜನರಿಗೆ ಸುಮಾರು 1,200 ಕೋಟಿ ರೂಪಾಯಿಗಳಷ್ಟು ನೆರವು ಸಿಕ್ಕಿದೆ. ಜೊತೆಗೆ ಉದ್ಯೋಗ ಸೃಷ್ಟಿಗಾಗಿ ಜಿಲ್ಲೆಯಲ್ಲಿ 37 ಕೋಟಿ ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ. ನಾನು ಹಾಗೂ ಹಿರಿಯ ನಾಯಕರಾದ ಪ್ರಕಾಶ್ ಹುಕ್ಕೇರಿ ಅವರು ಯಾವಾಗಲೂ ಕ್ಷೇತ್ರದ ಜನರ ಮತ್ತು ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್. ಡಿ. ಕೊಳೆಕರ ಮಾತನಾಡಿ, “ನಮ್ಮ ದೇಶ ಎಣ್ಣೆಬೀಜ ಉತ್ಪಾದನೆಯಲ್ಲಿ ಹಿಂದುಳಿದಿದ್ದು, ಉತ್ಪಾದನೆ ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ತಂದಿವೆ. ಕ್ಷೇತ್ರದಲ್ಲಿ ರೈತ ಸಮೃದ್ಧಿ ಯೋಜನೆಯಡಿ 1,265 ಕುಟುಂಬಗಳಿಗೆ 37 ಕೋಟಿ ರೂಪಾಯಿ ಸಬ್ಸಿಡಿ ದೊರೆತಿದೆ,” ಎಂದರು. ಅಲ್ಲದೆ, ಕಾರ್ಮಿಕರ ಕೊರತೆ ನೀಗಿಸಲು 100 ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಶಾಸ್ತ್ರೋಕ್ತ ಕೃಷಿಯಿಂದ ರೈತರು ಆರ್ಥಿಕವಾಗಿ ಬೆಳೆಯಲು ಸಾಧ್ಯ. ಕರ್ನಾಟಕ ಸರ್ಕಾರ ಶೇ. 95 ರಷ್ಟು ಸಬ್ಸಿಡಿ ನೀಡುತ್ತಿದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡ ಜಯಪಾಲ ಬೊರಗಾವೆ ಮಾತನಾಡಿ, ಶಾಸಕ ಗಣೇಶ ಹುಕ್ಕೇರಿ ಅವರು ಸವಳು-ಜವಳು ಜಮೀನು ಅಭಿವೃದ್ಧಿ ಯೋಜನೆ ರೂಪಿಸಿದ್ದರಿಂದ ಬೆಳೆ ಉತ್ಪಾದನೆ ಹೆಚ್ಚಿ, ರೈತರಿಗೆ ಅಪಾರ ಲಾಭವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಕೃಷಿ ಸಾಧನೆ ಮಾಡಿದ ರೈತರಿಗೆ *’ಆತ್ಮ ಪ್ರಶಸ್ತಿ’* ನೀಡಿ ಸತ್ಕರಿಸಲಾಯಿತು ಮತ್ತು ಫಲಾನುಭವಿ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಟಿ. ಎಸ್. ಮೊರೆ, ಬೆಳಗಾವಿ ಉಪ ಕೃಷಿ ನಿರ್ದೇಶಕರಾದ ಸಲೀಂ ಸಂಗತತ್ರಾಸ್, ಸತೀಶ್ ಕುಲಕರ್ಣಿ, ಪಿ. ಆಯ್. ಕೂರೆ, ವೃಷಭ ಬಾಳಿಕಾಯಿ, ರಾಮಾ ಮಾನೆ, ಇರ್ಫಾನ ಬೆಪ್ಪಾರಿ, ಗುಲಾಬಹುಸೇನ ಬಾಗವಾನ, ಅನಿಲ್ ಮಾನೆ, ಸಾಬೀರ್ ಜಮಾದಾರ, ರವಿ ಮಾಳಿ, ವಿನೋದ ಮಾಳಗೆ, ಶ್ಯಾಮ್ ರೇವಡೇ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುದರ್ಶನ್ ಖೋತ,ಸಹಾಯಕ ಕೃಷಿ ನಿರ್ದೇಶಕರಾದ ಬಸವರಾಜ್ ದಳವಾಯಿ, ಶಿವಯೋಗಿ ಹಂಪನವರ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ರೈತರು ಉಪಸ್ಥಿತರಿದ್ದರು.
ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ್ ಯರಗೊಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಷ ಸಂಕಪಾಳ ಕಾರ್ಯಕ್ರಮ ನಿರೂಪಿಸಿದರು.
