ಮಂಗಳೂರು ನಗರದ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸದಸ್ಯರು ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.



ದೇವಸ್ಥಾನದ ಆವರಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದದವರು ತಂತ್ರಿವರೇಣ್ಯರ ನೇತೃತ್ವದಲ್ಲಿ, ವೇದಘೋಷದೊಂದಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ದೇವಸ್ಥಾನದ ಪ್ರವೇಶದ್ವಾರದ ಹೊರಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಹಾಗೂ ‘ಶಕ್ತಿ’ ಯೋಜನೆಯ ಫಲಾನುಭವಿ ಮಹಿಳೆಯರು ತುಳುನಾಡಿನ ಸಾಂಪ್ರದಾಯಿಕ ಕೃಷಿಕರ ಸಂಕೇತವಾದ ‘ಮುಟ್ಟಾಲೆ’ ಧರಿಸಿ, ಯಕ್ಷಗಾನ ವೇಷಧಾರಿಗಳೊಂದಿಗೆ ಪನ್ನೀರು ಚಿಮುಕಿಸಿ, ಮಂಗಳಾರತಿ ಎತ್ತಿ ಹಾಗೂ ಪುಷ್ಪವೃಷ್ಟಿಗೈದು ಅದ್ಧೂರಿ ಸ್ವಾಗತ ಕೋರಿದರು.



ಸಿಎಂ ಡಿ ಕೆ ಶಿವಕುಮಾರ್ ಅವರು ವಿಶೇಷ ಸಚಿವ ಸಂಪುಟ ಸಭೆಗೆ ಮಂಗಳೂರಿನ ಸರ್ಕಿಟ್ ಹೌಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಂಬಾರಿ ಬಸ್ (ತೆರೆದ ವಾಹನ) ಮೂಲಕ ಸಾಗಿದರು. ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರ ತಂಡಗಳು ಪ್ರದರ್ಶನ ನಡೆಸಿ ಸರ್ಕಾರವನ್ನು ಸ್ವಾಗತಿಸಿದರು.


ನಂತರ ಮಂಗಳೂರಿನ ಸರ್ಕಿಟ್ ಹೌಸ್ ಬಳಿಯ ಯುದ್ಧ ಸ್ಮಾರಕಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸಚಿವರಾದ ಯು ಟಿ ಖಾದರ್, ನರೇಂದ್ರ ಸ್ವಾಮಿ, ವಿಜಯಾನಂದ ಕಾಶಪ್ಪನವರ್ ನಿವೃತ್ತ ಯೋಧರು ಉಪಸ್ಥಿತರಿದ್ದರು.

