Belagavi

ಪರಿಸರ ಸಮತೋಲನದಲ್ಲಿ ಬಿದಿರಿನ ಮಹತ್ವ ಅಪಾರ: ಎಸಿಎಫ್ ಬಸವರಾಜ ವಾಳದ_

Share

ವಿಶ್ವ ಬಿದಿರು ದಿನದ ಅಂಗವಾಗಿ ಖಾನಾಪುರ ಅರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಾಳದ ಅವರು ಇಂದು ಸಾರ್ವಜನಿಕರಿಗೆ ಕರೆ ನೀಡಿ, ಪರಿಸರ ಸಮತೋಲನದಲ್ಲಿ ಬಿದಿರಿನ ಮಹತ್ವವನ್ನು ಒತ್ತಿ ಹೇಳಿದರು.

“ಬಿದಿರು ಕೇವಲ ಒಂದು ಸಸ್ಯವಲ್ಲ, ಅದು ಪ್ರಕೃತಿಯ ಸಮತೋಲನದ ಕೀಲಿಕೈ,” ಎಂದು ಹೇಳಿದ ಅವರು, ಮಣ್ಣು ಸವೆತ ತಡೆ, ಭೂಗರ್ಭ ಜಲ ಮಟ್ಟ ಹೆಚ್ಚಳ, ವಾಯು ಶುದ್ಧೀಕರಣ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಬಿದಿರು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು. ಬಿದಿರು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ಸಹಾಯಕವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ದಾರಿ ತೋರುತ್ತದೆ ಎಂದರು.

ಖಾನಾಪುರ ಅರಣ್ಯ ಉಪವಿಭಾಗದಲ್ಲಿ ಬಿದಿರು ಬೆಳವಣಿಗೆ ಅಭಿವೃದ್ಧಿಗೆ ಸಾಕಷ್ಟು ದುಡಿಯಲಾಗಿದೆ ಎಂದು ಹೇಳಿದ ಅವರು, ಬಿದಿರು 40ರಿಂದ 60 ವರ್ಷಗಳವರೆಗೆ ಬದುಕಿ ಕೊನೆಗೆ ಹೂಬಿಟ್ಟು ಸಾಯುತ್ತದೆ ಎಂದು ತಿಳಿಸಿದರು. “ಬಿದಿರಿನ ಅವಸಾನದ ನಂತರ ಇಲಿ, ಹೆಗ್ಗಣಗಳು, ಹಾವು, ಹದ್ದು ಸಹ ಹೆಚ್ಚಾಗುತ್ತವೆ. ಬಿದಿರಿನ ಬಗೆಗೆ ಸಮಾಜದಲ್ಲಿ ಅನೇಕ ಋಣಾತ್ಮಕ ಚರ್ಚೆಗಳನ್ನು ಮಾಡಲಾಗುತ್ತದೆ,” ಎಂದು ಅವರು ಮಾರ್ಮಿಕವಾಗಿ ನುಡಿದರು.

ಆನೆ, ಕಾಡೆಮ್ಮೆ, ಕಾಟೆ, ಕಡವೆ, ಚುಕ್ಕೆಜಿಂಕೆ ಇತ್ಯಾದಿ ಪ್ರಾಣಿಗಳ ಆಹಾರಕ್ಕಾಗಿ ಬಿದಿರು ಅವಲಂಬಿಸಿವೆ. ಮಾನವನ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಸಹ ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು.

ಅರಣ್ಯಾಧಿಕಾರಿ ವಾಳದ ಅವರು ಸಾರ್ವಜನಿಕರಿಗೆ ಮನವಿ ಮಾಡಿ, ಮನೆ, ಶಾಲೆ, ಕಚೇರಿ ಆವರಣಗಳಲ್ಲಿ ಬಿದಿರು ನೆಡಲು, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಿದಿರಿನ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಬಿದಿರು ಕಾಡುಗಳನ್ನು ರಕ್ಷಿಸಲು ಕರೆ ನೀಡಿದರು. “ಬಿದಿರು ನೆಡುವುದು, ಬೆಳೆಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಹಸಿರು, ಶುದ್ಧ ಪರಿಸರವನ್ನು ಕಾಣಬಹುದು,” ಎಂದು ಅವರು ಹೇಳಿದರು.

ವಿಶ್ವ ಬಿದಿರು ದಿನದ ಈ ಸಂದರ್ಭದಲ್ಲಿ, ಖಾನಾಪುರ ಅರಣ್ಯ ಇಲಾಖೆ ಬಿದಿರು ನೆಡುವಿಕೆ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಸಿರು ಭವಿಷ್ಯಕ್ಕಾಗಿ ಇಂದೇ ಬಿದಿರು ನೆಡೋಣ ಎಂಬ ಸಂದೇಶವನ್ನು ಅವರು ಜನತೆಗೆ ತಲುಪಿಸಿದರು.

ಕಾರ್ಯಕ್ರಮದಲ್ಲಿ ಲೋಂಡಾ ವಲಯ ಅರಣ್ಯಾಧಿಕಾರಿ ಮೃತ್ಯುಂಜಯ ಗಣಾಚಾರಿ, ಉಪವಲಯ ಅರಣ್ಯಾಧಿಕಾರಿ ವಿಶ್ವನಾಥ ಮಂಗಳಗಟ್ಟಿ ಹಾಗೂ ಅರಣ್ಯ ಸಿಬ್ಬಂಧಿ ಉಪಸ್ಥಿತರಿದ್ದರು.

Tags:

error: Content is protected !!