ಭಜನೆ ಹಾಗೂ ದೇವನಾಮಸ್ಮರಣೆಯಿಂದ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಬಹುದು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿಜಯಪುರ ನಗರದ ಕೃಪಾಮಯಿ ಶಾರದಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಕೈವಲ್ಯಮಯಿ ಮಾತಾಜಿ ಹೇಳಿದರು. ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆ ಹಾಗೂ ಪಿಯು ವಿಜ್ಞಾನ ಕಾಲೇಜಿನಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಭಜನಾ ಹಾಗೂ ಸತ್ಸಂಗ ಕಾರ್ಯಕ್ರಮ ಆಯೋಜಿಸ ಲಾಗಿತ್ತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಕೈವಲ್ಯಮಯಿ ಮಾತಾಜಿ, ಗಣೇಶನ ಆರಾಧನೆಯ ಮಹತ್ವ ಹಾಗೂ ಗಣೇಶನ ಸ್ವರೂಪದಲ್ಲಿರುವ ಆಧ್ಯಾತ್ಮಿಕ ಸಂದೇಶಗಳನ್ನು ವಿವರಿಸಿದರು. ಗಣೇಶನ ದೊಡ್ಡ ತಲೆಯು ವಿಶಾಲವಾಗಿ ಚಿಂತಿಸುವ ಗುಣವನ್ನು, ದೊಡ್ಡ ಕಿವಿಗಳು ಒಳ್ಳೆಯ ಮಾತುಗಳನ್ನು ಹೆಚ್ಚು ಆಲಿಸುವ ಗುಣವನ್ನು ಸೂಚಿಸುತ್ತವೆ. ಸಣ್ಣ ಕಣ್ಣುಗಳು ಏಕಾಗ್ರತೆಯಿಂದ ಗುರಿಯನ್ನು ನೋಡುವುದನ್ನು, ದೊಡ್ಡ ಹೊಟ್ಟೆ ಜೀವನದಲ್ಲಿ ಎದುರಾಗುವ ಒಳ್ಳೆಯದು-ಕೆಟ್ಟದ್ದನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣವನ್ನು ಪ್ರತಿಬಿಂಬಿಸುತ್ತವೆ ಎಂದು ಗಣೇಶನ ವಿವಿಧ ಅಂಗಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಅತ್ಯಂತ ಮುಖ್ಯ. ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆಯುತ್ತಿದ್ದು, ಅತಿಯಾದ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಅಧ್ಯಯನದ ಮೇಲೆ ಏಕಾಗ್ರತೆ ಕಡಿಮೆಯಾಗಬಹುದು. ಆದ್ದರಿಂದ ಮೊಬೈಲ್‌ನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಎಂದು ಸಲಹೆ ನೀಡಿದರು. ಭಜನೆ, ದೇವನಾಮಸ್ಮರಣೆ ಹಾಗೂ ಸತ್ಸಂಗದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪ್ರತಿನಿತ್ಯ ಸ್ವಲ್ಪ ಸಮಯವನ್ನು ದೇವರ ಸ್ಮರಣೆ, ಧ್ಯಾನ ಮತ್ತು ಉತ್ತಮ ಚಿಂತನೆಗಳಿಗೆ ಮೀಸಲಿಡುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು, ಸಮಯದ ಮಹತ್ವ ಅರಿತು, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಜನೆ ಹಾಗೂ ದೇವನಾಮಸ್ಮರಣೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದರು. ಗಣೇಶೋತ್ಸವದ ಅಂಗವಾಗಿ ನಡೆದ ಸತ್ಸಂಗವು ವಿದ್ಯಾರ್ಥಿಗಳಿಗೆ ಭಕ್ತಿ, ಏಕಾಗ್ರತೆ, ಶಿಸ್ತು ಹಾಗೂ ಉತ್ತಮ ಜೀವನಮೌಲ್ಯಗಳ ಕುರಿತು ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ, ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ, ಆಡಳಿತಾಧಿಕಾರಿ ಸಂಜೀವ ಮಿರ್ಜಿ, ಪ್ರಿನ್ಸಿಪಲ್ ಅಭಿಜಿತ ಗಾಯಕವಾಡ, ವೈಸ್ ಪ್ರಿನ್ಸಿಪಲ್ ಜುಬೇರ್ ಸೈಯ್ಯದ್ ಉಪಸ್ಥಿತರಿದ್ದರು.
