ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಧಾರವಾಡದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಮೂರು ದಿನಗಳ ಪೂಜಾ ಕಾರ್ಯಕ್ರಮದ ಬಳಿಕ ಭವ್ಯ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.


ವೀರ ಸಾವರ್ಕರ್ ಗೆಳೆಯರ ಬಳಗದಿಂದ ಮಾಳಮಡ್ಡಿ ನಗರದ ಸ್ಟೇಷನ್ ರಸ್ತೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆ ಮಾಡಿ ಮೂರು ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ವಿಘ್ನನಿವಾರಕನಿಗೆ ವಿಶೇಷವಾಗಿ ಅಲಂಕರಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಡಿಜೆ ಬಳಸದೆ ಸಾಂಪ್ರದಾಯಿಕ ವಾದ್ಯಗಳ ನಾದದೊಂದಿಗೆ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ವಾದ್ಯಗಳ ತಾಳಕ್ಕೆ ಯುವಕರು ಹಾಗೂ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಭಕ್ತರು ‘ಗಣಪತಿ ಬಪ್ಪಾ ಮೋರೆಯಾ’ ಘೋಷಣೆಗಳನ್ನು ಮೊಳಗಿಸಿ ಭಕ್ತಿಭಾವ ಮೆರೆದರು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ವೀಕ್ಷಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ಮೂರ್ತಿಯನ್ನು ನಗರದ ನುಚಂಬ್ಲಿ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
