ನಿಪ್ಪಾಣಿ-ಮುಧೋಳ ಮಾರ್ಗದ ಚಿಕ್ಕೋಡಿಯ ಪ್ರಿಯಾಂಕಾ ಬಾರ್ ಬಳಿ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಚಿಕ್ಕೋಡಿಯ ಮಾತಂಗಕೇರಿ ಗಲ್ಲಿ ನಿವಾಸಿ ಶಿವಾನಂದ ಯಲ್ಲಪ್ಪ ಗಾಡಿವಡ್ಡರ (35) ಮೃತಪಟ್ಟ ದುರ್ದೈವಿ. ಶಿವಾನಂದ ಅವರು ನಿಪಾಣಿಯಿಂದ ಚಿಕ್ಕೋಡಿ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನವೊಂದು ರಭಸದಿಂದ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದ ತಕ್ಷಣ ಸಂಚಾರ ವಿಭಾಗದ ಪೊಲೀಸ್ ಉಪನಿರೀಕ್ಷಕಿ ರೂಪಾಲಿ ಗುಡೋದಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಪತ್ತೆಗೆ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
