ಹಣಕಾಸು ವ್ಯವಹಾರದ ವೈಮನಸ್ಸಿನಿಂದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯಲ್ಲಾಪುರ ಕ್ರಾಸ್ ಬಳಿ ಕೇವಲ ಹತ್ತು ಸಾವಿರ ರೂಪಾಯಿ ಸಾಲದ ಹಣದ ಗಲಾಟೆಗೆ 38 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಎನ್. ಉಮಾಮಹೇಶ್ವರ ಅವರನ್ನು ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಅರುಣ್ ಕುಮಾರ್ ಎಂಬಾತ ಉಮಾಮಹೇಶ್ವರ ಬಳಿ 60 ಸಾವಿರ ರೂ. ಸಾಲ ಕೇಳಿದ್ದು, 50 ಸಾವಿರ ರೂ. ನೀಡಿದ ನಂತರವೂ ವಿವಾದ ಮುಂದುವರಿದಿತ್ತು. ಕೊನೆಯಲ್ಲಿ ಉಳಿದ 10 ಸಾವಿರ ರೂ. ನೀಡಲು ಮುಂದಾದ ವೇಳೆ ಅರುಣ್ ಕುಮಾರ್, ಹಂಡಿ ಹನುಮಂತ ಮತ್ತು ಮಂಜುನಾಥ್ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುರುಗೋಡು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
