Chikkodi

ಶಿರಗಾಂವ ಬಸವೇಶ್ವರ ಜಾತ್ರಾ ಮಹೋತ್ಸವ: ಜನಮನ ಸೆಳೆದ ರೋಮಾಂಚಕಾರಿ ಕುಸ್ತಿ ಪಂದ್ಯಾವಳಿ

Share

ತಾಲೂಕಿನ‌ ಶಿರಗಾಂವ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ರೋಮಾಂಚಕಾರಿ ಕುಸ್ತಿ ಪಂದ್ಯಾವಳಿಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿದವು. ನೂರಾರು ವರ್ಷಗಳ ಪಾರಂಪರಿಕ ಕ್ರೀಡೆಗೆ ಸಾಕ್ಷಿಯಾದ ಐತಿಹಾಸಿಕ ಕುಸ್ತಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕ್ರೀಡಾಭಿಮಾನಿಗಳು ಪ್ರತಿಯೊಂದು ಪಂದ್ಯವನ್ನೂ ನೋಡಿ ಸಂಭ್ರಮಿಸಿದರು.

ಈ ಕುಸ್ತಿಯಲ್ಲಿ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಸಿದ್ಧ ಪೈಲ್ವಾನರು ತಮ್ಮ ಕುಸ್ತಿ ಕೌಶಲ್ಯ ಹಾಗೂ ಬಲಪ್ರದರ್ಶನ ನೀಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಗದ್ದುಗೆಯ ಕಾಳಗದಲ್ಲಿ ಗೆದ್ದು ಬೀಗಿದ ವಿಜೇತ ಪೈಲ್ವಾನರಿಗೆ ನಗದು ಬಹುಮಾನ ಹಾಗೂ ಗೌರವ ಸನ್ಮಾನಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌರವಸಿಂಹ ಮುತಾಲಿಕ ಸರ್ಕಾರ ಅವರು, ಗ್ರಾಮೀಣ ಭಾಗದ ಕ್ರೀಡೆಯಾದ ಕುಸ್ತಿಯನ್ನು ಜೀವಂತವಾಗಿರಿಸಲು ಮತ್ತು ಈ ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದ ಎಲ್ಲ ಸಂಘಟಕರಿಗೂ ಹಾಗೂ ಗ್ರಾಮಸ್ಥರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ವಿಶೇಷ ಆಕರ್ಷಣೆಯಾಗಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕುಸ್ತಿಪಟುಗಳಿಗೆ ಶಕ್ತಿ ತುಂಬಿ ಹುರಿದುಂಬಿಸಿದರು. ಜಾತ್ರೆಯ ನಿಮಿತ್ತ ಬೆಳಗಿನ ಜಾವದಿಂದಲೇ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

Tags:

error: Content is protected !!