ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿಯಲ್ಲಿದ್ದ ಸರ್ಕಾರಿ ಶಾಲೆಯನ್ನು ಪುನರುಜ್ಜೀವನಗೊಳಿಸಿ, ಆಂಗ್ಲ ಮಾಧ್ಯಮದ ಶಿಕ್ಷಣದೊಂದಿಗೆ ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಅನಿಲ ಶಹಾಪುರ ಅವರಿಗೆ ಜಿಲ್ಲಾ ಮಟ್ಟದ ‘ಆದರ್ಶ ಶಿಕ್ಷಕ’ ಪ್ರಶಸ್ತಿ ಲಭಿಸಿದೆ.


1994ರಲ್ಲಿ ಸಹ ಶಿಕ್ಷಕರಾಗಿ ಆಗಮಿಸಿದ ಅನಿಲ ಶಹಾಪುರ ಶಾಲೆಯಲ್ಲಿ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದಾಗ ಧೃತಿಗೆಡಲಿಲ್ಲ. ಶಾಸಕ ಗಣೇಶ ಹುಕ್ಕೇರಿ ಹಾಗೂ ಗ್ರಾಮದ ಮುಖಂಡ ಅನಿಲ ಪಾಟೀಲ ಅವರ ಸಹಕಾರದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಮಂಜೂರಾತಿ ಪಡೆದರು. ಬಳಿಕ ಚಂದೂರ, ಯಡೂರ, ಮಾಂಜರಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸಿದರು. ಪರಿಣಾಮವಾಗಿ, ಇಂದು ಎಲ್.ಕೆ.ಜಿ ಯಿಂದ 7ನೇ ತರಗತಿವರೆಗೆ ಒಟ್ಟು 133 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ದಾನಿಗಳು, ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರ ನೆರವಿನಿಂದ ಸುತ್ತಮುತ್ತಲಿನ ಮಕ್ಕಳಿಗಾಗಿ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ.3 ಸರ್ಕಾರಿ ಹಾಗೂ 1 ಅತಿಥಿ ಶಿಕ್ಷಕರ ಜೊತೆಗೆ, ಗ್ರಾಮಸ್ಥರ ಸಹಕಾರದಿಂದ ಹೆಚ್ಚುವರಿಯಾಗಿ 6 ಖಾಸಗಿ ಶಿಕ್ಷಕರನ್ನು ನೇಮಿಸಿಕೊಂಡು ಉತ್ತಮ ಬೋಧನೆ ನೀಡಲಾಗುತ್ತಿದೆ.

ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪದನಾ ಸ್ವಾಮೀಜಿ, ಶಾಸಕ ಗಣೇಶ ಹುಕ್ಕೇರಿ, ಸಂಸದೆ ಪ್ರಿಯಂಕಾ ಜಾರಕಿಹೊಳಿ ಹಾಗೂ ಡಿಡಿಪಿಐ ಅಜೀತ ಮನ್ನಿಕೇರಿ ಅವರ ಉಪಸ್ಥಿತಿಯಲ್ಲಿ ಅನಿಲ ಶಹಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಾಧನೆಗೆ ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
