Belagavi

ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ: ಪರಂಪರೆ ಉಳಿಸಲು ಹಿರಿಯ ಕಲಾವಿದರ ಶ್ರಮ

Share

ಪರಿಸರ ಕಾಳಜಿಯ ಈ ಕಾಲದಲ್ಲಿ ಪ್ಲಾಸ್ಟಿಕ್ ಹಾಗೂ ಪಿಒಪಿ ಮೂರ್ತಿಗಳ ಅಬ್ಬರದ ನಡುವೆಯೂ, ಅಳಿವಿನಂಚಿನಲ್ಲಿರುವ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿ ನಿರ್ಮಾಣ ಕಲೆಗೆ ಮೂರನೇ ತಲೆಮಾರಿನಿಂದ ಜೀವತುಂಬುತ್ತಿರುವ ಬೆಳಗಾವಿಯ ಪಾಲಕರ್ ಕುಟುಂಬದ ಸ್ಫೂರ್ತಿದಾಯಕ ಸಾಧನೆಯ ವಿಶೇಷ ವರದಿ ಇಲ್ಲಿದೆ ನೋಡಿ.

ಪರಿಸರ ಕಾಳಜಿಯ ಜಾಗೃತಿ ಮೂಡುತ್ತಿರುವ ಇಂದಿನ ದಿನಗಳಲ್ಲಿ, ಬೆಳಗಾವಿ ನಗರದಲ್ಲಿ ಶೇಡು ಗಣೇಶ ಮೂರ್ತಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮೂರ್ತಿಗಳ ಅಡ್ಡಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುತ್ತಿರುವುದು ಈ ಸಕಾರಾತ್ಮಕ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಈ ಪರಿಸರಸ್ನೇಹಿ ಪರಂಪರೆಯನ್ನು ಕಾಯ್ದುಕೊಳ್ಳುವಲ್ಲಿ ಬೆಳಗಾವಿಯ ಕೆಲವೇ ಕೆಲವು ಸಾಂಪ್ರದಾಯಿಕ ಕುಶಲಕರ್ಮಿಗಳು ಶ್ರಮಿಸುತ್ತಿದ್ದು, ಇವರಲ್ಲಿ ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಮೂಲದವರಾದ ಹಾಗೂ ದಶಕಗಳಿಂದ ಬೆಳಗಾವಿಯಲ್ಲಿ ನೆಲೆಸಿರುವ ಪಾಲಕರ್ ಕುಟುಂಬದ ಕೊಡುಗೆ ಅನನ್ಯ.

ಪತ್ರಕರ್ತರಾದ ಪರಶರಾಮ್ ಪಾಲ್ಕರ್ ಅವರ ಕುಟುಂಬದಲ್ಲಿ ಮೂರನೇ ತಲೆಮಾರಿನ ವಾರಸುದಾರರು ಈ ಕರಕುಶಲತೆಯನ್ನು ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಇವರ 76 ವರ್ಷದ ಹಿರಿಯ ತಂದೆ ಎಲ್ಲಪ್ಪ ಪಾಲ್ಕರ್ ಅವರು ಇಳಿವಯಸ್ಸಿನಲ್ಲೂ ಉತ್ಸಾಹದಿಂದ ಗಣಪತಿ ಮೂರ್ತಿಗಳನ್ನು ನಿರ್ಮಿಸುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಐತಿಹಾಸಿಕ ಬೆಳಗಾವಿಯ ಮರಾಠಾ ಸೆಂಟರ್‌ನ ಸಾರ್ವಜನಿಕ ಗಣಪತಿ ಬಪ್ಪರ ಭವ್ಯ ಮೂರ್ತಿಯನ್ನು ಸಹ ಇವರೇ ನಿರ್ಮಿಸುತ್ತಿರುವುದು ಇವರ ಕರಕುಶಲತೆಯ ಹೆಗ್ಗುರುತಾಗಿದೆ. ಕೋಟೆ ಪ್ರದೇಶದ ದುರ್ಗಾದೇವಿ ದೇವಾಲಯದ ಮುಂದಿನ ರಸ್ತೆಯಲ್ಲಿರುವ ತಮ್ಮ ಮನೆಯಲ್ಲೇ ಈ ಕಲಾಕೃತಿಗಳನ್ನು ತಯಾರಿಸುತ್ತಿದ್ದು, ಇಲ್ಲಿ ಒಂದು ಅಡಿಯಿಂದ ಮೂರು ಅಡಿ ಎತ್ತರದ ಆಕರ್ಷಕ ಮನೆಬಳಕೆಯ ಗಣಪತಿ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ.

ಆದರೆ ಈ ಪರಿಸರಸ್ನೇಹಿ ಕಲೆಯ ಬೆಳವಣಿಗೆಗೆ ಬೆಳಗಾವಿಯಲ್ಲಿ ಹಲವು ಸವಾಲುಗಳಿವೆ. ಪ್ರಸ್ತುತ ಇಡೀ ನಗರದಲ್ಲಿ ಶೇಡು ಮಣ್ಣಿನ ಮೂರ್ತಿಗಳನ್ನು ತಯಾರಿಸುವ ಕೇವಲ ಮೂರರಿಂದ ನಾಲ್ಕು ನೈಜ ಮೂರ್ತಿಕಾರರು ಮಾತ್ರ ಉಳಿದುಕೊಂಡಿದ್ದಾರೆ. ಈ ಕುರಿತು ಅಳಲು ತೋಡಿಕೊಂಡಿರುವ ಕಲಾವಿದರಾದ ಯಲ್ಲಪ್ಪ ಪಾಲಕರ್ ಅವರು, ನೆರೆಯ ಗೋವಾ ರಾಜ್ಯದ ಸರ್ಕಾರವು ಅಲ್ಲಿನ ಸ್ಥಳೀಯ ಕಲಾವಿದರಿಗೆ ವಿಶೇಷ ಪ್ರೋತ್ಸಾಹಧನ ನೀಡಿ ಗೌರವಿಸುತ್ತಿರುವಂತೆ, ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಬೆಳಗಾವಿಯ ಸಾಂಪ್ರದಾಯಿಕ ಕಲಾವಿದರಿಗೂ ಆರ್ಥಿಕ ಮಾನಧನ ನೀಡಿ ಪ್ರೋತ್ಸಾಹಿಸಬೇಕೆಂದು ಬಲವಾದ ಬೇಡಿಕೆ ಮುಂದಿಟ್ಟಿದ್ದಾರೆ.

Tags:

error: Content is protected !!