Belagavi

ಬೆಳಗಾವಿಯ ಸದಾಶಿವನಗರ ಮರಗಾಯಿ ದೇವಸ್ಥಾನದಲ್ಲಿ ಶ್ರಾವಣ ಸಂಭ್ರಮ: ವಿಜೃಂಭಣೆಯ ಮಹಾಪ್ರಸಾದ ವಿತರಣೆ

Share

ಬೆಳಗಾವಿಯ ಸದಾಶಿವನಗರದ ಪ್ರಸಿದ್ಧ ಮರಗಾಯಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ವಿತರಣೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆಯಿಂದಲೇ ದೇವಿಗೆ ವಿವಿಧ ಅಭಿಷೇಕಗಳು ಹಾಗೂ ವಿಶೇಷ ಪೂಜೆಗಳು ನಡೆದಿದ್ದು, ಸಾವಿರಾರು ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಧನ್ಯತೆ ಮೆರೆದರು.

ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸದಾಶಿವನಗರದ ಮರಗಾಯಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ವೈಭವದಿಂದ ನೆರವೇರಿಸಲಾಯಿತು. ಮುಂಜಾನೆಯಿಂದಲೇ ಶ್ರೀ ದೇವಿಗೆ ಮಹಾ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿತು. ದೇವಿಯ ಕೃಪೆಗೆ ಪಾತ್ರರಾಗಲು ಸದಾಶಿವನಗರ ಹಾಗೂ ಬೆಳಗಾವಿ ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಮಧ್ಯಾಹ್ನದ ನಂತರ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಬೃಹತ್ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 5,000ಕ್ಕೂ ಅಧಿಕ ಭಕ್ತರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಹಾಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದ ಕುರಿತು ದೇವಸ್ಥಾನದ ಪ್ರಮುಖರಾದ ಅಜಿತ್ ಚವ್ಹಾಣ್ ಅವರು ಮಾಹಿತಿ ನೀಡಿದ್ದು, ಸರ್ವ ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದರು.

Tags:

error: Content is protected !!