ಖಾನಾಪೂರ ತಾಲೂಕಿನ ಲೋಕೋಳ್ಳಿ ಕ್ರಾಸ್–ತೋಪಿನಕಟ್ಟಿ ಮಾರ್ಗದಲ್ಲಿ ಭೀಕರ ಸಂಭವಿಸಿದ್ದು ಅಪಘಾತದಲ್ಲಿ 23 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನ ತಂದೆಯೂ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಈ ದುರಂತ ಘಟನೆಯಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಪರಿಸರದಲ್ಲಿ ಶೋಕದ ವಾತಾವರಣ ಆವರಿಸಿದೆ.

ಮೃತ ಯುವಕನನ್ನು ಪುಂಡಲಿಕ ಅಶೋಕ ನಾಂದೂರಕರ (ವಯಸ್ಸು 23, ಸಾ. ಲಕ್ಕೇಬೈಲ್) ಎಂದು ಗುರುತಿಸಲಾಗಿದ್ದು, ಅವರ ತಂದೆ ಅಶೋಕ ನಾಂದೂರಕರ (ವಯಸ್ಸು 60) ಅವರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ
ಇದರ ಬಗ್ಗೆ ತಿಳಿದು ಬಂದ ಹೆಚ್ಚಿನ ಮಾಹಿತಿ ಏನೆಂದರೆ, ಪುಂಡಲಿಕ ಹಾಗೂ ಅವರ ತಂದೆ ಅಶೋಕ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಬೆಳಗಾವಿ ಕಡೆಗೆ ತೆರಳುತ್ತಿದ್ದರು. ಲೋಕೋಳ್ಳಿ ಕ್ರಾಸ್ನಿಂದ ತೋಪಿನಕಟ್ಟಿ ಮಾರ್ಗದಲ್ಲಿರುವ ಒಂದು ತಿರುವಿನಲ್ಲಿ ಅವರ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಅಪರಿಚಿತ ಟೆಂಪೋವೊಂದು ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸದಿಂದ, ಪುಂಡಲಿಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅವರ ತಂದೆ ಅಶೋಕ ನಾಂದೂರಕರ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯ ನಾಗರಿಕರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಶೋಕ ನಾಂದೂರಕರ ಅವರೂ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಅಪರಿಚಿತ ಟೆಂಪೋ ಚಾಲಕ ವಾಹನ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗಾಗಿ ಸಂಬಂಧಿಸಿದ ವಾಹನ ಹಾಗೂ ಚಾಲಕನನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಪುಂಡಲಿಕ ನಾಂದೂರಕರ ಅವರು ಉದ್ಯಮಬಾಗ್ ಪ್ರದೇಶಕ್ಕೆ ನಿಯಮಿತವಾಗಿ ಕೆಲಸಕ್ಕೆ ತೆರಳುತ್ತಿದ್ದರು. ಅವರ ತಂದೆ ಅಶೋಕ ಅವರು ಗವಂಡಿ ಕೆಲಸ ಮಾಡಿಕೊಂಡು ಕುಟುಂಬದ ಜೀವನ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಖಾನಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲಸಾಬ ಗೌಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಕೈಗೊಂಡರು. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಘಾತ ಯಾವ ವಾಹನದಿಂದ ಸಂಭವಿಸಿದೆ ಹಾಗೂ ಪರಾರಿಯಾಗಿರುವ ಚಾಲಕ ಯಾರು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
