Khanapur

ಇನ್ ನ್ಯೂಸ್ ಇಂಪ್ಯಾಕ್ಟ್; ನಂದಗಡದಲ್ಲಿ ಎಸ್‌ಐಆರ್ ನೋಟಿಸ್‌ಗೆ ಶಾಲಾ ಮಕ್ಕಳ ಬಳಕೆ: ಬಿಎಲ್‌ಒಗೆ ನೋಟಿಸ್ ಜಾರಿ

Share

ಮತದಾರರ ಪರಿಷ್ಕರಣೆ ನೋಟಿಸ್ ಹಂಚಲು ಶಾಲಾ ಮಕ್ಕಳನ್ನು ದುಡಿಸಿಕೊಂಡಿದ್ದ ಖಾನಾಪೂರು ತಾಲೂಕಿನ ನಂದಗಡದ ಬಿಎಲ್‌ಒ ಆರ್.ಪಿ. ಡಿಸೋಜಾ ಅವರ ದುರ್ವರ್ತನೆ ವಿರುದ್ಧ ನಮ್ಮ ಇನ್ ನ್ಯೂಸ್ ಬಿತ್ತರಿಸಿದ ವರದಿಗೆ ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿದೆ. ಸುದ್ದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಮೇಲಾಧಿಕಾರಿಗಳು, ಬೇಜವಾಬ್ದಾರಿ ಬಿಎಲ್‌ಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯಲೋಪ ಎಸಗಿದವರಿಗೆ ಬಿಸಿ ಮುಟ್ಟಿಸಿದಂತಾಗಿದೆ.

ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ರಾಮಾಪೂರ ಓಣಿಯಲ್ಲಿ ಮತದಾರರ ಪರಿಷ್ಕರಣೆ ಪ್ರಕ್ರಿಯೆಯಡಿ (SIR) ನೋಟಿಸ್ ನೀಡಲು ಸರ್ಕಾರಿ ಶಾಲೆಯ ಮಕ್ಕಳನ್ನು ಬಳಸಿಕೊಂಡಿದ್ದ ಬಿಎಲ್‌ಒ ಆರ್.ಪಿ. ಡಿಸೋಜಾ ಅವರ ಬೇಜವಾಬ್ದಾರಿ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಸಾರ್ವಜನಿಕರು ಹಾಗೂ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಪ್ರಶ್ನಿಸಿದಾಗ, ಬಿಎಲ್‌ಒ ನಿರ್ಲಕ್ಷ್ಯದ ಉತ್ತರ ನೀಡಿ ಜಾರಿಕೊಳ್ಳಲು ಯತ್ನಿಸಿದ್ದರು. ಈ ಗಂಭೀರ ಲೋಪದ ಕುರಿತು ‘ಇನ್ ನ್ಯೂಸ್’ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ನಮ್ಮ ಈ ವರದಿಯ ಬಿತ್ತರದ ಬೆನ್ನಲ್ಲೇ ಎಚ್ಚೆತ್ತ ಆಡಳಿತ ಯಂತ್ರವು, ಕರ್ತವ್ಯ ಲೋಪವೆಂದು ಪರಿಗಣಿಸಿ ಸಹಾಯಕ ನೋಂದಣಾಧಿಕಾರಿಗಳಿಂದ ಸಂಬಂಧಿತ ಬಿಎಲ್‌ಒ ಡಿಸೋಜಾ ಅವರಿಗೆ ಅಧಿಕೃತವಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಬಿಎಲ್‌ಒ ನೀಡುವ ಸ್ಪಷ್ಟನೆಯ ಆಧಾರದ ಮೇಲೆ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದ್ದು, ಇದು ನಮ್ಮ ‘ಇನ್ ನ್ಯూಸ್’ ವರದಿಯ ನೇರ ಪರಿಣಾಮವಾಗಿದೆ.

Tags:

error: Content is protected !!