ರಾಜ್ಯಾದ್ಯಂತ ಪೊಲೀಸ್ ಎಂದರೆ ಭಯವಲ್ಲ, ಭರವಸೆ ಮೂಡಿಸುವ ವ್ಯವಸ್ಥೆಯಾಗಬೇಕು. ಪ್ರತಿಯೊಬ್ಬರೂ ಕಾನೂನು ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು. ಕಾನೂನಿನ ಅರಿವು ಇಲ್ಲದ ವ್ಯಕ್ತಿ ಮನುಷ್ಯನಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.

ಸೋಮವಾರ ಕಾಗವಾಡದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜ್ಯೋತಿಕುಮಾರ್ ಪಾಟೀಲ್ ಅವರ ನೇತೃತ್ವದ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡರು. ಇದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಕಾಗವಾಡ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಕುರಿತು ಸಾರ್ವಜನಿಕರು ಗಮನಕ್ಕೆ ತಂದಾಗ, ಅಧ್ಯಕ್ಷೆ ಕೂಡಲೇ ಅಥಣಿ ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು. ಬಳಿಕ ಬಸ್ ನಿಲ್ದಾಣಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ಈ ಕುರಿತು ಡಿಪೋ ಮ್ಯಾನೇಜರ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರೆತ ಬಳಿಕ ಬಸ್ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಮಾಡಲಾಯಿತು.
ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಈ ಸಮಸ್ಯೆಗಳ ಕುರಿತು ಮಂಗಳವಾರ ಬೆಳಗಾವಿಯಲ್ಲಿ ನಡೆಯಲಿರುವ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಉತ್ತರ ಪಡೆದುಕೊಳ್ಳುವುದಾಗಿ ಡಾ. ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಕಾಗವಾಡ ಪಟ್ಟಣದ ರಸ್ತೆಯ ಬಳಿ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಕೆಲವು ಮಹಿಳೆಯರು ಬೀದಿಯಲ್ಲಿಯೇ ಶೌಚ ಮಾಡಬೇಕಾದ ಪರಿಸ್ಥಿತಿ ಇದೆ ಎಂಬ ವಿಷಯವನ್ನು ಸಾರ್ವಜನಿಕರು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಶೌಚಾಲಯ ನಿರ್ಮಿಸಲು ಆದೇಶಿಸಿದರು.

ಉಗಾರದ ಕೆಲವರು ಚರಂಡಿ ನಿರ್ಮಾಣ ಹಾಗೂ ಮನೆ ನಿರ್ಮಿಸಿಕೊಳ್ಳಲು ನೆರವು ನೀಡುವಂತೆ ಮನವಿ ಸಲ್ಲಿಸಿದರು.
ಮದಬಾವಿಯ ಮಂಗಳಮುಖಿಯೊಬ್ಬರು ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಯುವ ಮುಖಂಡ ಚಿದಾನಂದ ಸೌದಿ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ವಹಿಸಿಕೊಂಡರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ್ ಬಾಗಡಿ ಅವರು ನಿವೇಶನದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಕಾಗವಾಡ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಖೂತ್ ಅವರಿಗೆ ತಾಲೂಕಿನ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಡಾ. ನಾಗಲಕ್ಷ್ಮಿ ಚೌದರಿ ಸೂಚಿಸಿದರು. ಅವರ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟಿಡಿಪಿಓ ಸಂಜುಕುಮಾರ್ ಸದಲಗೆ ಅವರೊಂದಿಗೆ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ, ಅಗತ್ಯ ಸೂಚನೆಗಳನ್ನು ನೀಡಿದರು. ತಹಸೀಲ್ದಾರ್ ರವೀಂದ್ರ ಹಾದಿಮನಿ ಸ್ವಾಗತಿಸಿದರು.
ಕನ್ನಡ ಮಾತೆ ಫೌಂಡೇಶನ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಘಟನೆಯ ಸೇವಾ ಕಾರ್ಯಗಳನ್ನು ಕಂಡು ಡಾ. ನಾಗಲಕ್ಷ್ಮಿ ಚೌದರಿ ಸಂತಸ ವ್ಯಕ್ತಪಡಿಸಿ, ಸಂಘಟನೆಯ ಕಾರ್ಯಕ್ಕೆ ಶುಭ ಹಾರೈಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಕಾಗವಾಡಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಶ್ನಿಸಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಿದ್ಧರಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಂಜಯ್ ತಳವಲಕರ್ ವಹಿಸಿದ್ದರು. ಕನ್ನಡ ಮಾತೆ ಸಂಘಟನೆಯ ಅಧ್ಯಕ್ಷೆ ಪೂಜಾ ಕಾಂಬಳೆ, ವಿನಯಕ ಚೌಗುಲೆ, ಶಿವರಾಜ್ ಪಾಟೀಲ್, ರವಿ ಕಾಂಬಳೆ, ಸಾಧಿಕ್ ಮಕಾಣದಾರ್, ರಮೇಶ್ ಚೌಗುಲೆ, ವೈಭವ ದೊತರೆ, ಚಿದಾನಂದ ಅವಟಿ ಸೇರಿದಂತೆ ಕನ್ನಡಾಭಿಮಾನಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ
