Vijaypura

ಗೊಂಬೆಗಳೇ ಹೇಳುತ್ತಿವೆ ಸನಾತನ ಹಬ್ಬಗಳ ಕಥೆ..!

Share

ನಮ್ಮ ಹಬ್ಬಗಳು ಕೇವಲ ಸಂಭ್ರಮವಲ್ಲ… ಅವು ನಮ್ಮ ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಮತ್ತು ಜೀವನ ಮೌಲ್ಯಗಳ ಪ್ರತೀಕ. ಯುಗಾದಿಯಿಂದ ಫಾಲ್ಗುಣ ಪೂರ್ಣಿಮೆಯವರೆಗೆ… ವರ್ಷವಿಡೀ ಬರುವ ಹಬ್ಬಗಳ ಹಿಂದೆ ಒಂದೊಂದು ಕಥೆ, ಒಂದೊಂದು ಪೌರಾಣಿಕ ಹಿನ್ನೆಲೆ ಇದೆ. ಆದ್ರೆ… ಈ ಎಲ್ಲಾ ಹಬ್ಬಗಳನ್ನ ಒಂದೇ ಕಡೆ ನೋಡಲು ಸಾಧ್ಯವೇ..? ಸಾಧ್ಯ…! ಅದೂ ಗೊಂಬೆಗಳ ರೂಪದಲ್ಲಿ… ಹಬ್ಬಗಳನ್ನೇ ಕಣ್ಣಮುಂದೆ ತಂದು ನಿಲ್ಲಿಸಿದ್ರೆ ಹೇಗಿರುತ್ತೆ..? ವಿಜಯಪುರದ ಈ ಮನೆಯಲ್ಲಿ ಪ್ರತಿ ಶ್ರಾವಣ ಮಾಸದ ಕೊನೆಯ ಸಂಪತ್ ಶುಕ್ರವಾರ ನಡೆಯುವ ಪೂಜೆ ಇದೀಗ ಇಡೀ ಏರಿಯಾಗೆ ಫೇಮಸ್. ಅಷ್ಟಕ್ಕೂ… ಈ ಬಾರಿ ಸುಪ್ರೀಯಾ ಅವರು ಸೃಷ್ಟಿಸಿರುವ ಆ ಗೊಂಬೆಗಳ ಲೋಕದಲ್ಲಿ ಏನಿದೆ..? ಬನ್ನಿ ನೋಡೋಣ…

ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ… ನಮ್ಮ ಸಂಪ್ರದಾಯ ದ ನೆನಪುಗಳನ್ನ ಮತ್ತೆ ಜೀವಂತ ಗೊಳಿಸುವ ಅದ್ಭುತ ಪ್ರಯತ್ನ… ಇದು ವಿಜಯಪುರದ ಗೃಹಿಣಿ ಸುಪ್ರೀಯಾ ಅವರ ಕಲಾ ಲೋಕ. ಹೋಟೆಲ್ ಉದ್ಯಮಿ ಶಾಂತೇಶ ಕಳಸಗೊಂಡ ಅವರ ಪತ್ನಿಯಾಗಿರುವ ಸುಪ್ರೀಯಾ, ಶ್ರಾವಣ ಮಾಸದಲ್ಲಿ ನಡೆಯುವ ಸಂಪತ್ ಲಕ್ಷ್ಮಿ ಪೂಜೆಯನ್ನು ವಿಭಿನ್ನವಾಗಿ ಆಚರಿಸಿ ಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಒಂದೊಂದು ಥೀಮ್… ಆ ಥೀಮ್‌ಗೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿ, ಅವುಗಳ ಮೂಲಕ ಒಂದು ಸನ್ನಿವೇಶ ಸೃಷ್ಟಿಸಿ, ನೋಡುಗರನ್ನು ಆ ಕಥೆಯೊಳಗೆ ಕರೆದೊಯ್ಯುವುದು ಇವರ ವಿಶೇಷತೆ. ಗೊಂಬೆಗಳು ಕೇವಲ ಗೊಂಬೆಗ ಳಾಗಿರಲ್ಲ… ಅವು ಮಾತನಾಡುತ್ತವೆ… ಕಥೆ ಹೇಳುತ್ತವೆ… ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸುತ್ತಿವೆ.

ಈ ಬಾರಿ ಸುಪ್ರೀಯಾ ಅವರ ಮನೆಯ ಥೀಮ್ ಇನ್ನಷ್ಟು ವಿಶೇಷ… ಸನಾತನ ಧರ್ಮದ ಹಬ್ಬಗಳ ವೈಭವ! ಯುಗಾದಿಯ ಹೊಸ ವರ್ಷದ ಸಂಭ್ರಮದಿಂದ ಆರಂಭವಾಗಿ ರಾಮನವಮಿ, ಅಕ್ಷಯ ತೃತೀಯಾ, ವಟ ಸಾವಿತ್ರಿ ವ್ರತ, ಆಷಾಢ ಏಕಾದಶಿ, ನಾಗರ ಪಂಚಮಿ… ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಗೌರಿ ಹಬ್ಬ, ನವರಾತ್ರಿ, ಮಹಾನವಮಿ, ಕೋಜಾಗಿರಿ ಹುಣ್ಣಿಮೆ, ದೀಪಾವಳಿ, ತುಳಸಿ ವಿವಾಹ, ಪಂಡರಪುತ್ರ ಯಾತ್ರೆ, ಮಕರ ಸಂಕ್ರಾಂತಿ, ರಥಸಪ್ತಮಿ ಮಹಾಶಿವರಾತ್ರಿ, ಹೊಳಿ… ಫಾಲ್ಗುಣ ಪೂರ್ಣಿಮೆ… ಹೀಗೆ ವರ್ಷವಿಡೀ ಬರುವ ಹಬ್ಬಗಳನ್ನ ಗೊಂಬೆಗಳ ಮೂಲಕ ಒಂದೇ ಕಥಾ ಲೋಕದಲ್ಲಿ ಕಟ್ಟಿಕೊಡಲಾಗಿದೆ. ಪ್ರತಿ ಗೊಂಬೆಯ ಜೋಡಣೆಯಲ್ಲೂ ಸೂಕ್ಷ್ಮತೆ, ಪ್ರತಿ ಸನ್ನಿವೇಶದಲ್ಲೂ ಒಂದು ಸಂದೇಶ… ಹೀಗಾಗಿ ಈ ಅಲಂಕಾರ ನೋಡಲು ಏರಿಯಾದ ಮಹಿಳೆಯರು ಮುಗಿ ಬೀಳುತ್ತಿದ್ದಾರೆ. ಕೊನೆಯ ಸಂಪತ್ ಶುಕ್ರವಾರದಿಂದ ಕೊನೆಯ ಶ್ರಾವಣ ಸೋಮವಾರದವರೆಗೆ ನಡೆಯುವ ಈ ಅಲಂಕಾರ ಮತ್ತು ಪೂಜೆಯನ್ನು ಕಣ್ತುಂಬಿಕೊಳ್ಳಲು ಮಹಿಳೆಯರು ಆಗಮಿ ಸುತ್ತಿದ್ದಾರೆ. ಹೀಗೆ ಬಂದ ಮಹಿಳೆಯರಿಗೆ ಉಡಿ ತುಂಬಲಾಗುತ್ತಿದೆ. ಹೀಗೆ ಮನಮೋಹಕ ಗೊಂಬೆಗಳ ದೃಶ್ಯಗಳನ್ನು ಕಂಡು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಅಲಂಕಾರ ನೋಡಲು ನೆರೆ ರಾಜ್ಯ ಕೊಲ್ಹಾಪುರ ದಿಂದ ಆಗಮಿಸಿರೋದು ವಿಶೇಷವಾಗಿದೆ.

ಇನ್ನೊಂದು ವಿಶೇಷತೆ ಅಂದ್ರೆ… ಸುಪ್ರೀಯಾ ಮತ್ತು ಶಾಂತೇಶ ಕಳಸ ಗೊಂಡ ದಂಪತಿಯ ಮಕ್ಕಳು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಮೊಬೈಲ್‌ ಲೋಕದಿಂದ ಸ್ವಲ್ಪ ದೂರ… ತಾಯಿ ಮಾಡುತ್ತಿರುವ ಅಲಂಕಾರಕ್ಕೆ ಕೈಜೋಡಿಸಿ, ನಮ್ಮ ಹಬ್ಬಗಳನ್ನ… ನಮ್ಮ ಸಂಪ್ರದಾಯವನ್ನ ಅರಿತುಕೊಳ್ಳುತ್ತಿದ್ದಾರೆ.
ಸುಪ್ರೀಯಾ ಅವರ ಈ ಪ್ರಯತ್ನಕ್ಕೆ ಪತಿ ಶಾಂತೇಶ ಕಳಸಗೊಂಡ ಹಾಗೂ ಸ್ನೇಹಿತೆಯರು ಬೆಂಬಲವಾಗಿ ನಿಂತಿದ್ದಾರೆ. ಕಳೆದ ವರ್ಷ ‘ಆಪರೇಷನ್ ಸಿಂಧೂರ’ ಥೀಮ್ ಮೂಲಕ ದೇಶಭಕ್ತಿಯ ಸಂದೇಶ ಸಾರಿದ್ದ ಸುಪ್ರೀಯಾ, ಈ ಬಾರಿ ಸನಾತನ ಧರ್ಮದ ಹಬ್ಬಗಳ ಮೂಲಕ ಸಂಸ್ಕೃತಿಯ ಪರಿಚಯ ಮಾಡಿಸುತ್ತಿದ್ದಾರೆ.

ಒಂದು ಕಾಲದಲ್ಲಿ…
ಅಜ್ಜ-ಅಜ್ಜಿಯರು ಹಬ್ಬಗಳ ಕಥೆ ಹೇಳುತ್ತಿದ್ದರು… ಪೋಷಕರು ಸಂಪ್ರದಾಯಗಳನ್ನ ಪರಿಚಯಿ ಸುತ್ತಿದ್ದರು… ಆದರೆ ಇಂದಿನ ಮೊಬೈಲ್ ಯುಗದಲ್ಲಿ… ಅದೆಲ್ಲವೂ ನಿಧಾನವಾಗಿ ಮರೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ, ಗೊಂಬೆಗಳ ಮೂಲಕವೇ ಹಬ್ಬಗಳನ್ನ ಪರಿಚಯಿಸಿ… ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನ ಕಣ್ಣಮುಂದೆ ತಂದು ನಿಲ್ಲಿಸಿರುವ ಸುಪ್ರೀಯಾ ಅವರ ಪ್ರಯತ್ನ ನಿಜಕ್ಕೂ ಮಾದರಿ. ಹಬ್ಬ ಆಚರಣೆ ಅಂದ್ರೆ ಕೇವಲ ಹೊಸ ಬಟ್ಟೆ, ಸಿಹಿ ತಿಂಡಿ, ಸಂಭ್ರಮವಲ್ಲ… ಅದರ ಹಿಂದಿರುವ ಕಥೆ, ಪರಂಪರೆ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದೂ ನಮ್ಮ ಜವಾಬ್ದಾರಿ. ನಮ್ಮ ಸಂಸ್ಕೃತಿ ಉಳಿಯಬೇಕು ಅಂದ್ರೆ… ಇಂತಹ ಪ್ರಯತ್ನಗಳು ಮನೆಮನೆಯಲ್ಲೂ ಮೂಡಬೇಕು. ಹಬ್ಬಗಳು ಕೇವಲ ಆಚರಣೆಯಾಗದೆ… ಮುಂದಿನ ಪೀಳಿಗೆಗೆ ನಮ್ಮ ಬೇರುಗಳ ಪರಿಚಯವಾಗಲಿ.
ಇದು ಸುಪ್ರೀಯಾ ಅವರ ಗೊಂಬೆಗಳ ಲೋಕ ನೀಡುವ ಸುಂದರ ಸಂದೇಶ ಎಂದರೆ ತಪ್ಪಾಗಲಾರದು.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!