kagawad

ಶಿರಗುಪ್ಪಿ: ಶಾರ್ಟ್ ಸರ್ಕ್ಯೂಟ್‌ನಿಂದ 8 ಎಕರೆ ಕಬ್ಬು ಭಸ್ಮ; ₹22 ಲಕ್ಷ ನಷ್ಟ, ಹೆಸ್ಕಾಂ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ

Share

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಹೆಸ್ಕಾಂ ಇಲಾಖೆಯ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಳೆದು ನಿಂತಿದ್ದ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ, ಸುಮಾರು 8 ಎಕರೆಗೂ ಹೆಚ್ಚು ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯಿಂದ ರೈತರಿಗೆ ಸುಮಾರು 22 ಲಕ್ಷ ರೂಪಾಯಿಗಳ ಅಪಾರ ನಷ್ಟ ಸಂಭವಿಸಿದ್ದು, ನೊಂದ ರೈತರಿಗೆ ಹೆಸ್ಕಾಂ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸಲು ಕಬ್ಬು ಬೆಳೆಗಾರ ಹೋರಾಟಗಾರರು ಮುಂದೆ ಬರಬೇಕೆಂದು ಆಗ್ರಹಿಸಿದ್ದಾರೆ.

ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಶಿರಗುಪ್ಪಿ ಗ್ರಾಮದ ಸರ್ವೆ ನಂಬರ್ 01 ಮತ್ತು 06 ರಲ್ಲಿಯ ಶಿವಾನಂದ್ ಪಾಟೀಲ್, ಸುಶೀಲಾಬಾಯಿ ಪಾಟೀಲ್, ಸದಾನಂದ್ ಪಾಟೀಲ್, ಈರಗೌಡಾ ಪಾಟೀಲ್, ಶೇಖರ್ ಪಾಟೀಲ್ ಮತ್ತು ಸಮರ್ಥ ಪಾಟೀಲ್ ಇವರಿಗೆ ಸೇರಿದ ಒಟ್ಟು 9 ಎಕರೆ ಪ್ರದೇಶದಲ್ಲಿದ್ದ ಕಬ್ಬಿನ ಬೆಳೆಗೆ ಬೆಂಕಿ ಆವರಿಸಿದೆ.

ವಿದ್ಯುತ್ ಸಂಪರ್ಕಿಸುವ ತಂತಿಗಳು ಸಡಿಲಗೊಂಡು ಪರಸ್ಪರ ತಾಗಿದ್ದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಈ ತಂತಿಗಳ ಅಪಾಯದ ಕುರಿತು ಈಗಾಗಲೇ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೆಸ್ಕಾಂ m ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪ್ರಗತಿಪರ ರೈತ ಚಿದಾನಂದ ಪಾಟೀಲ್, “ಸುಟ್ಟು ಹೋದ ಕಬ್ಬು ‘86032 ಫೌಂಡೇಶನ್’ ತಳಿಯದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ, ಯೋಗ್ಯ ಗೊಬ್ಬರ ಹಾಗೂ ಹನಿ ನೀರಾವರಿ ಮುಖಾಂತರ ಬೆಳೆಸಲಾಗಿತ್ತು. ಪ್ರತಿ ಎಕರೆಗೆ 80 ರಿಂದ 85 ಟನ್ ಇಳುವರಿ ಬರುವ ನಿರೀಕ್ಷೆಯಿತ್ತು. ಹೆಸ್ಕಾಂ ಇಲಾಖೆಯ ಬೇಜವಾಬ್ದಾರಿಯಿಂದ ಈ ಅನಾಹುತ ಸಂಭವಿಸಿದೆ” ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಯಾವುದೇ ಸಕ್ಕರೆ ಕಾರ್ಖಾನೆಗಳು ಚಾಲನೆಯಲ್ಲಿ ಇಲ್ಲದಿರುವುದರಿಂದ ಬೆಂಕಿಗೆ ಆಹುತಿಯಾದ ಕಬ್ಬನ್ನು ಎಲ್ಲಿಗೆ ಸಾಗಿಸಬೇಕು ಎಂಬುದು ರೈತರಿಗೆ ದೊಡ್ಡ ಚಿಂತೆಯಾಗಿದೆ. ಕಬ್ಬು ಹೋರಾಟಗಾರರಾದ ಚಿನ್ನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ನೆರವಿಗೆ ಬರಬೇಕೆಂದು ಶಿವಾನಂದ ಪಾಟೀಲ್ ವಿನಂತಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಮಾತ್ರವಲ್ಲದೆ, ಹೊಲದಲ್ಲಿದ್ದ ಹನಿ ನೀರಾವರಿ ಪೈಪ್‌ಗಳು ಸಹ ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ರೈತ ಈರಗೌಡಾ ಪಾಟೀಲ್ ಅಳಲು ತೋಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಉಗಾರ ಸಕ್ಕರೆ ಕಾರ್ಖಾನೆ ಹಾಗೂ ಚಿಕ್ಕೋಡಿಯ ಸಿಬಿಕೆಎಸ್ಎಸ್ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ನಂತರ ಹೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಿದ್ದಾರೆ. ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags:

error: Content is protected !!