ಚಿಕ್ಕೋಡಿ:ಮದ್ಯಪಾನ ಮಾಡಿ ಗಲಾಟೆ ಮಾಡಿದ ಆರೋಪಿಗೆ ಚಿಕ್ಕೋಡಿಯ ಜೆಎಂಎಫ್ಸಿ ನ್ಯಾಯಾಲಯವು 50 ಗಿಡಗಳನ್ನು ನೆಡುವಂತೆ ಆದೇಶಿಸುವ ಮೂಲಕ ಪರಿಸರ ಸ್ನೇಹಿ ಹಾಗೂ ಮಾದರಿ ಶಿಕ್ಷೆ ವಿಧಿಸಿದೆ.

ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತನೇ ಈ ವಿಶಿಷ್ಟ ಶಿಕ್ಷೆಗೆ ಒಳಗಾದ ಆರೋಪಿ. ಸಾರ್ವಜನಿಕ ಸ್ಥಳದಲ್ಲಿ ಕುಡಿದು ಗಲಾಟೆ ಮಾಡಿದ ಆರೋಪ ಎದುರಿಸುತ್ತಿದ್ದ ಈತ, ನ್ಯಾಯಾಲಯದ ಮುಂದೆ ತನ್ನ ತಪ್ಪನ್ನು ಸ್ವಯಂಪ್ರೇರಿತನಾಗಿ ಒಪ್ಪಿಕೊಂಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು, ಆರೋಪಿಗೆ ದಂಡ ಅಥವಾ ಜೈಲು ಶಿಕ್ಷೆಯ ಬದಲು ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಶಿಕ್ಷೆ ಪ್ರಕಟಿಸಿದರು. ನ್ಯಾಯಾಲಯದ ಆವರಣದಲ್ಲಿ 25 ಸಸಿಗಳು ಹಾಗೂ ಸದಲಗಾ ಪೊಲೀಸ್ ಠಾಣೆಯ ಆವರಣದಲ್ಲಿ 25 ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ತೀರ್ಪು ನೀಡಿದರು.
ನ್ಯಾಯಾಲಯದ ಆದೇಶವನ್ನು ಶಿರಸಾವಹಿಸಿ ಪಾಲಿಸಿದ ಆರೋಪಿ ಅನಿಲ, ತನ್ನ ಪತ್ನಿಯೊಂದಿಗೆ ಆಗಮಿಸಿ ಚಿಕ್ಕೋಡಿ ಕೋರ್ಟ್ ಆವರಣದಲ್ಲಿ 25 ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳನ್ನು ನೆಡುವ ಮೂಲಕ ಶಿಕ್ಷೆ ಪೂರ್ಣಗೊಳಿಸಿದ್ದಾನೆ.
ತಪ್ಪು ಮಾಡಿದವರಿಗೆ ಕೇವಲ ದಂಡ ವಿಧಿಸದೇ, ಗಿಡಗಳನ್ನು ನೆಡಿಸುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಿದ ಕೋರ್ಟ್ನ ಈ ತೀರ್ಪು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
