ವಿಶ್ವಮಟ್ಟದಲ್ಲಿ ಧಾರವಾಡದ ಕೀರ್ತಿಯನ್ನು ಪತಾಕೆ ಹಾರಿಸಿರುವ ಯುವ ಕಲಾವಿದ ಅಮರ ರಾಜು ಕಾಳೆ ಅವರು ಒಂದೇ ಬಾರಿಗೆ ಮೂರು ಗಿನ್ನಿಸ್ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಾವುದೇ ಸಾಂಪ್ರದಾಯಿಕ ಕಲಾ ಶಿಕ್ಷಣ ಪಡೆಯದೆ ಸ್ವಯಂ ಕಲಿತು ಸಾಧನೆ ಮಾಡಿರುವ ಧಾರವಾಡದ ಯುವ ಕಲಾವಿದ ಅಮರ ರಾಜು ಕಾಳೆ ಅವರು ಕಲೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಮೂರು ಗಿನ್ನಿಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿ ಇತಿಹಾಸ ಬರೆದಿದ್ದಾರೆ. ಇತ್ತೀಚೆಗೆ 2026ರಲ್ಲಿ ಕೇವಲ ಅರಿಶಿನ ಮತ್ತು ಮೆಣಸಿನ ಪುಡಿ ಬಳಸಿ 1,892 ಚದರ ಅಡಿಯ ಬೃಹತ್ ‘Spice Painting’ ರಚಿಸಿ ದಾಖಲೆ ಬರೆದಿದ್ದಲ್ಲದೆ, ಅದರ ಮರುದಿನವೇ ಬಾಯಲ್ಲಿ ಕುಂಚ ಹಿಡಿದು 14 ಗಂಟೆಗಳ ನಿರಂತರ ಪರಿಶ್ರಮದಿಂದ 1,209 ಚದರ ಅಡಿಯ ‘Mouth Painting’ ಮೂಲಕ ಮತ್ತೊಂದು ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ನಿಂದ ಆಗಮಿಸಿದ ಈ ಗಿನ್ನಿಸ್ ಪ್ರಮಾಣಪತ್ರ ಹಾಗೂ ಪದಕಗಳನ್ನು ಇತ್ತೀಚೆಗೆ ಮಾನ್ಯ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಧಾರವಾಡ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಗೀತಾ ಸಿ.ಡಿ. ಅವರು ಕಲಾವಿದರ ತಂದೆ-ತಾಯಿಯರ ಸಮ್ಮುಖದಲ್ಲಿ ಹಸ್ತಾಂತರಿಸಿ ಆತ್ಮೀಯವಾಗಿ ಅಭಿನಂದಿಸಿದ್ದಾರೆ. ಈ ಮಹತ್ವದ ಸಾಧನೆಗೆ ಅರಣ್ಯ ಅಧಿಕಾರಿ ಯಶವಪಾಲ್ ಕ್ಷೀರಸಾಗರ್ ಅವರ ಮಾರ್ಗದರ್ಶನ ಹಾಗೂ ಹುಬ್ಬಳ್ಳಿ-ಧಾರವಾಡದ Mutha Wagmal Bhuraji Group (MWB Group) ನ ಸಂಪೂರ್ಣ ಸಹಕಾರ ದೊರೆತಿದ್ದು, ಕಲೆಯ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ವಿಶ್ವದ ಮುಂದೆ ಪರಿಚಯಿಸಿರುವ ಅಮರ ಕಾಳೆ ಅವರ ಈ ಸಾಧನೆಗೆ ನಾಡಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
