ಧಾರವಾಡದಲ್ಲಿ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿದ ಧರ್ಮಸ್ಥಳ ಭಕ್ತ ಬಳಗ, ಹಿಂದೂ ಸಂಘಟನೆ, ಎಬಿವಿಪಿ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ್ ತೀವ್ರವಾಗಿ ಖಂಡಿಸಿದ್ದಾರೆ. ಅವರು ಧಾರವಾಡ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರ ಏಕಪಕ್ಷೀಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ಎದುರು ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾದ ಎಬಿವಿಪಿ ಹಾಗೂ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದ ಅರವಿಂದ ಬೆಲ್ಲದ್, “ಆರ್‌ಎಸ್‌ಎಸ್ ವಿರುದ್ಧ ಧಿಕ್ಕಾರ ಕೂಗಿದವರನ್ನು ಏಕೆ ಬಂಧಿಸಿಲ್ಲ? ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಮಾತ್ರ ಪೊಲೀಸರು ಯಾಕೆ ಬಂಧಿಸಿದ್ದಾರೆ?” ಎಂದು ಪ್ರಶ್ನಿಸಿದರು. ರಸ್ತೆಯಲ್ಲಿ ಬಂದು ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದವರನ್ನು ಬಿಟ್ಟು, ಪ್ರಶ್ನಿಸಿದ ನಮ್ಮ ಕಾರ್ಯಕರ್ತರ ಮೇಲೆ ಮಾತ್ರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ದೂರಿದರು. ಕಾರ್ಯಕ್ರಮ ಆಯೋಜಕರ ವಿರುದ್ಧವೂ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಲಾಟೆ ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಈ ದೋಹ ಧೋರಣೆಯನ್ನು ಖಂಡಿಸಿದ ಅವರು, ಎಬಿವಿಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯ ವಿಡಿಯೋ ಸಾಕ್ಷ್ಯಗಳನ್ನು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.
