Dharwad

ಧಾರವಾಡದಲ್ಲಿ ಸ್ಥಗಿತಗೊಂಡ ಸಾಮಾಜಿಕ ಭದ್ರತಾ ಪಿಂಚಣಿ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Share

ವೃದ್ಧರ, ವಿಶೇಷಚೇತನರ, ವಿಧವಾ ಸೇರಿ ಇತರೆ ಪಿಂಚಣಿ ಹಣ ಸ್ಥಗಿತಗೊಂಡಿರುವುದನ್ನು ಖಂಡಿಸಿ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಧಾರವಾಡದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸುವುದು ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಸಮಿತಿಯ ನೇತೃತ್ವದಲ್ಲಿ ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜನರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ 5 ತಿಂಗಳಿನಿಂದ ಸಾಮಾಜಿಕ ಭದ್ರತಾ ಪಿಂಚಣಿಗಳ ಹಣ ಬಿಡುಗಡೆಯಾಗಿಲ್ಲ. ಇದನ್ನೇ ನಂಬಿಕೊಂಡು ಕೆಲವು ಕುಟುಂಬಗಳು ತಮ್ಮ ಜೀವನ ನಿರ್ವಹಣೆ ಮಾಡುತ್ತಿವೆ. ಆದರೆ ಇದುವರೆಗೂ ಬಾಕಿ ಪಿಂಚಣಿ ಹಣ ಬಿಡುಗಡೆ ಮಾಡಿಲ್ಲ. ಈ ಕೂಡಲೇ ಬಾಕಿ ಪಿಂಚಣಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು. ಜತೆಗೆ ಅರ್ಹತೆ ಇರುವ ಎಲ್ಲರಿಗೂ ಪಿಂಚಣಿ ಖಾತ್ರಿಪಡಿಸಬೇಕು. ಬೆಲೆಯೇರಿಕೆಯ ಹಿನ್ನೆಲೆಯಲ್ಲಿ ಎಲ್ಲಾ ಪಿಂಚಣಿಗಳ ಮೊತ್ತಗಳನ್ನು ಹೆಚ್ಚಿಸಲು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಒತ್ತಾಯಿಸಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ವೃದ್ಧರು, ವಿಧವೆಯರು, ವಿಕಲಚೇತನರು ಹಾಗೂ ಆದಾಯದ ಮೂಲಗಳೇ ಇಲ್ಲದ ದುರ್ಬಲ ವರ್ಗದ ಬಡ ಜನರು ಸಾಮಾಜಿಕ ಭದ್ರತಾ ಪಿಂಚಣಿಯನ್ನೇ ತಮ್ಮ ಜೀವನದ ಪ್ರಮುಖ ಆಸರೆಯಾಗಿ ಅವಲಂಬಿಸಿದ್ದಾರೆ. ಅತ್ಯಂತ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಈ ಜನರಿಗೆ ಪಿಂಚಣಿ ಹಣವು ಆಹಾರ, ಔಷಧಿ, ಆರೋಗ್ಯ ಮತ್ತು ದೈನಂದಿನ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಅತ್ಯಂತ ಅವಶ್ಯಕವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ನೀಡುತ್ತಿರುವ ಈ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನಿಲ್ಲಿಸಿರುವುದು ಅತ್ಯಂತ ಬಡಜನವಿರೋಧಿ ಕ್ರಮವಾಗಿದೆ. ಅರ್ಹತೆ ಇಲ್ಲದವರಿಗೆ ಸಾಮಾಜಿಕ ಭದ್ರತಾ ಪಿಂಚಣಿಗಳು ದೊರಕಲು ಭ್ರಷ್ಟ ವ್ಯವಸ್ಥೆ ಕಾರಣವೇ ಹೊರತು ಬಡಜನರಲ್ಲ. ಇತ್ತೀಚೆಗೆ, ಎಲ್ಲಾ ಸೌಕರ್ಯವನ್ನು ಹೊಂದಿದ್ದರೂ ಶಾಸಕರು, ಸಂಸದರು ಯಾವುದೇ ಚರ್ಚೆ ಇಲ್ಲದೆ ತಮ್ಮ ಪಿಂಚಣಿ ಹೆಚ್ಚಿಸಿಕೊಂಡಿದ್ದಾರೆ, ಆದರೆ ಬಡವರ ಪಿಂಚಣಿಗಳನ್ನು ದಾಖಲೆಗಳ ನೆಪವೊಡ್ಡಿ ರದ್ದುಗೊಳಿಸುತ್ತಿರುವುದು ಅಮಾನವೀಯವಾಗಿದೆ. ಈ ಕೂಡಲೇ ಈ ಹಿಂದೆ ನೀಡಲಾಗುತ್ತಿದ್ದ ಪಿಂಚಣಿದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

Tags:

error: Content is protected !!