Dharwad

ಧಾರವಾಡ ಹೊರವಲಯದ ವೆಂಕಟಾಪುರ ಬಳಿ ಭೀಕರ ಅಪಘಾತ: ಲಾರಿ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿ, ಸ್ಥಳದಲ್ಲೇ ಮೂವರು ಸಾವು

Share

ಮುಂದೆ ಸಾಗುತ್ತಿದ್ದ ಟ್ರಕ್‌ವೊಂದನ್ನು ತಪ್ಪಿಸಲು ಹೋಗಿ ಎರ್ಟಿಗಾ ಕಾರು ಡಿವೈಡರ್ ಮೇಲೆ ಹತ್ತಿ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅಪಘಾತ ಧಾರವಾಡ ಹೊರವಲಯದಲ್ಲಿ ಇಂದು ಮುಂಜಾನೆ ನಡೆದಿದೆ.

ಧಾರವಾಡ ಹೊರವಲಯದ ವೆಂಕಟಾಪುರ ಗ್ರಾಮದ ಬೆಳಗಾವಿ–ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮಂಜುನಾಥ (29), ವಿನಾಯಕ (27) ಹಾಗೂ ಬಸವರಾಜ (33) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

KA-04-MR-9948 ಸಂಖ್ಯೆಯ ಎರ್ಟಿಗಾ ಕಾರು ಬೆಳಗಾವಿಯಿಂದ ಧಾರವಾಡದತ್ತ ಬರುತ್ತಿತ್ತು. ಈ ವೇಳೆ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ವೊಂದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದ ಮೇಲೆ ಹತ್ತಿ ಬಳಿಕ ರಸ್ತೆಯಲ್ಲೇ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದವರು ಮೃತಪಟ್ಟಿದ್ದು, ಮೃತರು ಹರಿಹರ ಮೂಲದವರಾಗಿದ್ದು ಧಾರವಾಡದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಕಾರು ಚಾಲಕ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಹೊಸಯಲ್ಲಾಪುರದ ಬಸನಗೌಡ ಯಲ್ಲಪ್ಪಗೌಡ ಪಾಟೀಲ (26), ದಾವಣಗೆರೆಯ ಅಭಿಷೇಕ್ ಮಂಜಪ್ಪ ಕೆ.ಆರ್. (30) ಹಾಗೂ ಅಜಯ್ ಮಂಜಪ್ಪ ಕೆ.ಆರ್. (26) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗರಗ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!