VIJAYNAGAR

ಮಳೆಗಾಗಿ ದೇವರನ್ನೇ ಬೈಯುವ ವಿಶಿಷ್ಟ ಆಚರಣೆ!!!!ಹೊಸಪೇಟೆಯ ಕಾಟಮಯ್ಯ ದೇಗುಲದ ವಿಸ್ಮಯ ಪರಂಪರೆ…

Share

ಮಳೆಗಾಗಿ ಪ್ರಾರ್ಥಿಸುವುದು ಸಾಮಾನ್ಯ, ಆದರೆ ದೇವರಿಗೆ ಬೈದು ಮಳೆ ತರಿಸುವ ವಿಚಿತ್ರ ಆಚರಣೆ ಎಲ್ಲಾದರೂ ಉಂಟೆ? ಹೌದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂಥಹುದೇ ಒಂದು ವಿಸ್ಮಯಕಾರಿ ಹಾಗೂ ಭಕ್ತಿಪೂರ್ವಕ ಸಂಪ್ರದಾಯವೊಂದು ಜರುಗಿದೆ. ಹೊಸಪೇಟೆಯ ಐತಿಹಾಸಿಕ ಕಾಟಮಯ್ಯ ದೇಗುಲದಲ್ಲಿ ಭಕ್ತರು ವಿಭಿನ್ನ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಗಮನ ಸೆಳೆದಿದ್ದಾರೆ.

ದೇವರಲ್ಲಿ ಬೇಡಿಕೊಳ್ಳುವುದು ಭಕ್ತರ ಸಹಜ ಧರ್ಮ, ಆದರೆ ಮಳೆಯಾಗದಿದ್ದಾಗ ದೇವರನ್ನೇ ನೇರವಾಗಿ ಬೈದು ಒಲಿಸಿಕೊಳ್ಳುವ ವಿಚಿತ್ರ ಹಾಗೂ ವಿಸ್ಮಯಕಾರಿ ಸಂಪ್ರದಾಯವೊಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಚಾಲ್ತಿಯಲ್ಲಿದೆ. ಬೈಪಾಸ್ ರಸ್ತೆಯಲ್ಲಿರುವ ಸುಮಾರು 120 ವರ್ಷಗಳ ಇತಿಹಾಸವಿರುವ ಪ್ರಾಚೀನ ಕಾಟಮಯ್ಯ ದೇಗುಲದಲ್ಲಿ ಈ ವಿಶಿಷ್ಟ ಆಚರಣೆ ಜರುಗಿದ್ದು, ಭಕ್ತರು ವಿಭಿನ್ನ ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಮಳೆರಾಯ ಕೃಪೆ ತೋರದ ಕಾರಣ ಹೊಸಪೇಟೆಯ ಹೊರವಲಯದಲ್ಲಿರುವ ಕಲ್ಲಿನಿಂದ ನಿರ್ಮಿತವಾದ ಐತಿಹಾಸಿಕ ಕಾಟಮಯ್ಯ ದೇವಸ್ಥಾನದಲ್ಲಿ ಗ್ರಾಮಸ್ಥರು ಒಟ್ಟುಗೂಡಿ ವಿಶೇಷ ಪೂಜೆ ಹಾಗೂ ಗಂಗೆ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಬಾಯಿ ಬಡಿದುಕೊಂಡು, ದೇವರನ್ನು ಬಹಿರಂಗವಾಗಿ ಬೈಯುತ್ತಾ ಮಳೆ ಸುರಿಸುವಂತೆ ವಿನೂತನವಾಗಿ ಹರಕೆ ತೀರಿಸಿದ್ದಾರೆ. ಈ ಅಸಾಮಾನ್ಯ ಆಚರಣೆಯು ಸ್ಥಳೀಯರ ದೃಢ ನಂಬಿಕೆ ಹಾಗೂ ವಿಶಿಷ್ಟ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ.

ದೇವರನ್ನು ಬೈದು ಪ್ರಾರ್ಥಿಸಿದ ಬಳಿಕ ದೇವರಿಗೆ ಹುಗ್ಗಿ, ಬದನೆಕಾಯಿ ಪಲ್ಯ ಹಾಗೂ ಅನ್ನ-ಸಾಂಬಾರ್ ಸೇರಿದಂತೆ ನಾನಾ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಪೂಜಾ ಕೈಂಕರ್ಯಗಳ ಮುಕ್ತಾಯದ ನಂತರ ನೂರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ಜರುಗಿತು. ನಾಡಿನಲ್ಲಿ ಮಳೆ ಸಮೃದ್ಧವಾಗಿ ಸುರಿದು ರೈತರು ಹಾಗೂ ಜನಸಾಮಾನ್ಯರ ಬಾಳು ಹಸಿರಿನಿಂದ ಕೂಡಿರಲೆಂಬ ಆಶಯದೊಂದಿಗೆ ಈ ವಾರ್ಷಿಕ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

Tags:

error: Content is protected !!