ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ಮುಂದುವರಿಸಿರುವ ವಿಚಾರಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಮಾಡುವುದು ಬಿಜೆಪಿಯ ಪಕ್ಷದ ವಿಚಾರ. ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಡೆಸಿದ ಹೋರಾಟವೂ ಕಾರಣವಾಗಿರಬಹುದು ಎಂದು ಟಾಂಗ್ ನೀಡಿದ್ದಾರೆ.

ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಪಾದಯಾತ್ರೆ ಮಾಡುವುದು ಅವರ ಪಕ್ಷದ ನಿರ್ಧಾರ ಎಂದರು.
ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಡೆಸಿದ ಹೋರಾಟವೇ ಕಾರಣ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯ ಹೋರಾಟವೂ ರಾಜೀನಾಮೆಗೆ ಕಾರಣವಾಗಿರಬಹುದು. ಜೊತೆಗೆ ರಾಜೀನಾಮೆ ನಮ್ಮ ಪಕ್ಷದ ನಿರ್ಧಾರವೂ ಆಗಿರುತ್ತದೆ ಎಂದು ಹೇಳಿದರು.
ಇನ್ನು ವಾಲ್ಮೀಕಿ ಹಗರಣದ ಹಣ ಎಲ್ಲಿ ಹೋಯ್ತು ಎಂಬ ಬಿಜೆಪಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಹಣದ ಕುರಿತು ಸದನದಲ್ಲೇ ಮಾಹಿತಿ ನೀಡಲಾಗಿದೆ ಎಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಈಗ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರೂ ಈ ಕುರಿತು ಮಾತನಾಡಿದ್ದಾರೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸ್ಥಾನಗಳ ಬಗ್ಗೆ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಯಾರಿಗೆ ಏನು ನೀಡಬೇಕು ಎಂಬುದನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹಿಂದೆ ವಿಜಯಪುರಕ್ಕೆ ಎರಡು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಈ ಬಾರಿ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಕಾರಣಾಂತರಗಳಿಂದ ನೀಡಲಾಗಿಲ್ಲ. ಎಲ್ಲದಕ್ಕೂ ಕಾಯಬೇಕಾಗುತ್ತದೆ, ಸಮಯ ಬಂದಾಗ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಒಟ್ಟಿನಲ್ಲಿ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಯ ಹೋರಾಟಕ್ಕೂ ಕ್ರೆಡಿಟ್ ನೀಡುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನ ಸಿಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
