ಪತ್ರಕರ್ತ ಪರಶುರಾಮ ಶಿವಶರಣ ಅವರಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ರಚಿಸಿ ಅಕ್ರಮ ದಂಧೆಕೋರರ ಜಾಲ ಹಾಗೂ ಅವರ ಹಿಂದೆ ಇರುವ ಎಲ್ಲ ವ್ಯಕ್ತಿಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲ ಹಾಗೂ ಪಾಲಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ. ಆನಂದ ಅವರÀ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ಅವರು ಮಾತನಾಡಿ, ಕರ್ನಾಟಕ ಸರ್ಕಾರದ ಜನಪರ ಯೋಜನೆಯಾದ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮ ಸಂಗ್ರಹ ಹಾಗೂ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಅಕ್ರಮ ಚಟುವಟಿಕೆ ಕುರಿತು ಪತ್ರಕರ್ತ ಪರಶುರಾಮ ಶಿವಶರಣ ಅವರು 20-08-2026 ರ ರಂದು ಹೊಸ ದಿಗಂತ ಪತ್ರಿಕೆಯಲ್ಲಿ ‘ಬೇರು ಬಿಟ್ಟ ಅಕ್ರಮ ದಂಧೆಕೋರರ ಜಾಲ, ಕಾಳಸಂತೆಕೋರರಿAದ ಮಹಾರಾಷ್ಟ್ರಕ್ಕೆ ಸಾಗಣೆ, ಅನ್ನಭಾಗ್ಯ ಅಕ್ಕಿ ಖದೀಮರಿಗೆ ವಿಜಯಪುರ ಸ್ವರ್ಗ’ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಮಾಡುವ ಮೂಲಕ ಸರಕಾರದ ಜನಪರ ಯೋಜನೆಯು ಅಕ್ರಮ ದಂಧೆಕೋರರಿAದ ದುರ್ಬಳಕೆಯಾಗುತ್ತಿರುವ ಬಗ್ಗೆ ಸರಕಾರ ಗಮನಕ್ಕೆ ತಂದಿದ್ದರು. ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪತ್ರಕರ್ತ ಪರಶುರಾಮ ಶಿವಶರಣ ಅವರ ವರದಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಅಕ್ರಮ ದಂಧೆಕೋರರು ಪತ್ರಕರ್ತ ಪರಶುರಾಮ ಶಿವಶರಣ ಅವರ ಮೇಲೆ ಕುಪಿತಗೊಂಡು ಅವರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ ಪ್ರಕರಣ ಖಂಡನೀಯ ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಅವರು ಮಾತನಾಡಿ, ಸರಕಾರದ ಜನಪರ ಯೋಜನೆಯ ದುರ್ಬಳಕೆ ಕುರಿತು ವರದಿ ಮಾಡಿದ ಪತ್ರಕರ್ತರ ಮನೆಗೆ ಹೋಗಿ ಬೆದರಿಕೆ ಹಾಕುವ ಮಟ್ಟಕ್ಕೆ ಜಿಲ್ಲೆಯಲ್ಲಿ ಅಕ್ರಮ ದಂಧೆಕೋರರು ಬೆಳೆದಿದ್ದು, ಪೊಲೀಸ್ ಇಲಾಖೆಯ ಹಾಗೂ ಕಾನೂನಿನ ಭಯ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ. ಇಂತಹ ಕೃತ್ಯಗಳನ್ನು ನಾಗರೀಕ ಸಮಾಜ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪತ್ರಕರ್ತರನ್ನು ಬೆದರಿಸಿ ಅಕ್ರಮ ದಂಧೆಗಳನ್ನು ಮುಚ್ಚಿಹಾಕಲು ಯತ್ನಿಸುವ ಸಮಾಜಘಾತುಕ ಶಕ್ತಿಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯನ್ನು ತಡೆಗಟ್ಟಬೇಕು ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜು ತಡಲಗಿ, ಸಂತೋಷ ಕಲಗುಡಿ, ರಾಜು ಕುಮಟಗಿ, ಮಲ್ಲಿಕಾರ್ಜುನ ಗಣಿ, ಅಂಬಣ್ಣ ಗುನ್ನಾಪುರ, ಬಾಬು ಕೋಟಿಗುಂಡಿ, ಅನೀಲ ಪವಾರ, ಅಶೋಕ ವಾಲಿಕಾರ, ಪರಶುರಾಮ ಕುಚಬಾಳ, ಅನೀಲ ಇಕಡೆ, ಅಶೋಕ ಚೋಳಕೆ ಸೇರಿದಂತೆ ಮುಂತಾದವರು ಇದ್ದರು.
